ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ವಿಧಾನಪರಿಷತ್ ಚುನಾವಣೆ ಕಾವು ಏರತೊಡಗಿದೆ. ಜನೆವರಿ ತಿಂಗಳಲ್ಲಿ ಹಾಲಿ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಅದಕ್ಕೂ ಮುನ್ನ, ಡಿಸೆಂಬರ್ ಹೊತ್ತಿಗೆ ಚುನಾವಣೆ ನಡೆಯಬಹುದು.
ಬೆಳಗಾವಿ ಜಿಲ್ಲೆಯಿಂದ ಇಬ್ಬರನ್ನು ಆರಿಸಿ ಕಳಿಸಬೇಕಿದೆ. ಬಿಜೆಪಿಯ ಮಹಾಂತೇಶ ಕವಟಗಿಮಠ ಹಾಗೂ ಪಕ್ಷೇತರ ವಿವೇಕರಾವ್ ಪಾಟೀಲ ಹಾಲಿ ಸದಸ್ಯರು. ಈ ಹಿಂದೆ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ವಿವೇಕರಾವ್ ಪಾಟೀಲ ಅವರನ್ನು ಬೆಂಬಲಿಸಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈಗ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗಿದೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಆದರೆ ಬಿಜೆಪಿಯಲ್ಲಿ ಅವರಂದುಕೊಂಡಷ್ಟು ಸಹಕಾರ ಸಿಗದ್ದರಿಂದ ಬಿಜೆಪಿಗೆ ಅವರ ಸಹಕಾರ ಈ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಸಿಗಲಿದೆ ಎನ್ನುವುದನ್ನು ಕಾಲವೇ ಹೇಳಬೇಕಿದೆ. ಸಹೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುವ ಯೋಚನೆಯಲ್ಲಿ ರಮೇಶ ಜಾರಕಿಹೊಳಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಚಂದ್ರ ಜಾರಕಿಹೊಳಿ ಕೂಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಬಿಜೆಪಿ ಮತ್ತು ಜಾರಕಿಹೊಳಿ ಕುಟುಂಬದ ಪರಸ್ಪರ ಸಹಕಾರ ಎಷ್ಟರಮಟ್ಟಿಗೆ ಇರಲಿದೆ ಎನ್ನುವುದು ಈ ಚುನಾವಣೆಗೆ ಮುಖ್ಯವಾಗಲಿದೆ.
ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಅವರಿಗೆ ಮಾತ್ರ ಟಿಕೆಟ್ ನೀಡಬಹುದು. ಕವಟಗಿಮಠ ಈಗಾಗಲೆ ಇಡೀ ಜಿಲ್ಲೆಯನ್ನು ಸುತ್ತುತ್ತಿದ್ದು, ಪ್ರಚಾರ ಕಾರ್ಯವನ್ನು ಜೋರಾಗಿ ನಡೆಸಿದ್ದಾರೆ. ಪಕ್ಷದ ಶಾಸಕರ ಮೂಲಕ ಮತದಾರರನ್ನು ಸೆಳೆಯುವ ಕೆಲಸವನ್ನು ಶುರು ಮಾಡಿದ್ದಾರೆ. ಕಳೆದ ಅವಧಿಯಲ್ಲಿನ ಸಾಧನೆಗಳನ್ನು ಮುಂದಿಟ್ಟುಕೊಂಡು ಅವರು ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ ಅವರನ್ನು ನಿಲ್ಲಿಸುವುದು ಬಹುತೇಕ ಖಚಿತವಾಗಿದೆ. ಅವರಿಗೆ ಈಗಾಗಲೆ ಸತೀಶ್ ಜಾರಕಿಹೊಳಿ ಸೇರಿದಂತೆ ಬಹುತೇಕ ಎಲ್ಲ ಮುಖಂಡರೂ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿ ಅವರಿಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಚನ್ನರಾಜ ಹಟ್ಟಿಹೊಳಿ ಈಗಾಗಲೆ ಮತದಾರರ ಸಂಪರ್ಕ ಆರಂಭಿಸಿದ್ದಾರೆ. ಕೆಳಹಂತದಲ್ಲಿ ಅವರ ನೆಟ್ ವರ್ಕ್ ಗಟ್ಟಿಗೊಳಿಸಿದ್ದಾರೆ.
ಪ್ರಕಾಶ ಹುಕ್ಕೇರಿ ಕೂಡ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರಾದರೂ ಬರಲಿರುವ ಲೋಕಸಭಾ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡುವ ಭರವಸೆಯೊಂದಿಗೆ ತಟಸ್ಥಗೊಳಿಸಬಹುದು.
ಈ ಚುನಾವಣೆಗೆ ಸುಮಾರು 9 ಸಾವಿರ ಜನರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಅವಧಿ ಮುಗಿದಿರುವ ಪಟ್ಟಣ ಪಂಚಾಯಿತಿ ಚುನಾವಣೆಗಳು ವಿಧಾನಪರಿಷತ್ ಚುನಾವಣೆಗೂ ಮುನ್ನ ಆಗದಿದ್ದಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ.
ಒಟ್ಟಾರೆ ಈ ಚುನಾವಣೆ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಜಾತಿ ಸಮೀಕರಣವೂ ಹೆಚ್ಚಿನ ಕೆಲಸ ಮಾಡುವ ಸಾಧ್ಯತೆ ಇಲ್ಲದಿಲ್ಲ. ಒಂದು ದೃಷ್ಟಿಯಲ್ಲಿ ಪಕ್ಷಕ್ಕಿಂತಲೂ ಜಾತಿ ಹೆಚ್ಚು ಕೆಲಸ ಮಾಡಿದರೂ ಆಶ್ಚರ್ಯವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ