ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ವಿ.ಎಸ್. ಸಾಧುನವರ ಪರವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಸಾಪೂರ, ಅರಳಿಕಟ್ಟಿ, ಹಿರೇಬಾಗೇವಾಡಿ ಮುಂತಾದ ಸ್ಥಳಗಳಲ್ಲಿ ಮತಯಾಚನೆ ಮಾಡಿದರು.
ಶಾಸಕಿಯಾದ ಒಂದೇ ವರ್ಷದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಸುಮಾರು ಸಾವಿರ ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಿಸಿ ಭರವಸೆಗಳನ್ನು ಈಡೇರಿಸುತ್ತಿದ್ದೇನೆ. ಸಂಸದ ಸುರೇಶ ಅಂಗಡಿ ಹದಿನೈದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಮಾಡಲಿಲ್ಲ. ಕ್ಷೇತ್ರದ ಎಲ್ಲ ಕಡೆಗೂ ಅಂಗಡಿ ವಿರುದ್ಧ ಅಲೆ ಕಾಣುತ್ತಿದೆ ಎಂದು ಟೀಕಾಪ್ರಹಾರ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಸಾಧುನವರ ಅವರಿಗೆ ಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಹದಿನೈದು ವರ್ಷದಿಂದ ಅನಾಥಪ್ರಜ್ಞೆ ಅನುಭವಿಸಿದ ಕ್ಷೇತ್ರದ ಜನ ಈ ಬಾರಿ ಜನರ ಕಷ್ಟ ಸುಖದಲ್ಲಿ ಭಾಗಿಯಾಗುವ ಒಬ್ಬ ಕೆಲಸಗಾರನ ಕೈ ಹಿಡಿಯಲಿದ್ದು ಬಿಜೆಪಿ ನಾಯಕರ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗದೆ ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಸಾಧುನವರ ಅವರ ಸೊಸೆ ಪ್ರೀತಿ ಸಾಧುನವರ ಭಾಗಿಯಾಗಿದ್ದರು. ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತಯಾಚಿಸಿದ ಬಳಿಕ ಲಕ್ಷ್ಮಿ ಹೆಬ್ಬಾಳಕರ ಹಿರೇಬಾಗೇವಾಡಿ ಗ್ರಾಮದ ದರ್ಗಾಕ್ಕೆ ಭೇಟಿ ನೀಡಿ ದರ್ಗಾ ಅಜ್ಜನವರ ಆಶೀರ್ವಾದ ಪಡೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ