Kannada News

ಮುಖಕ್ಕೆ ಮಂಗಳಾರತಿ ಮಾಡಿ ಬಿಜೆಪಿಯವರನ್ನು ಮನೆಗೆ ಕಳಿಸಿ – ಸಿದ್ದರಾಮಯ್ಯ

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರ ಮತಯಾಚನೆ

 ಪ್ರಗತಿವಾಹಿನಿ ಸುದ್ದಿ, ರಾಮದುರ್ಗ : ”  ಕಳೆದ ಬಾರಿ ನಮ್ಮ ಅಧಿಕೃತ ಅಭ್ಯರ್ಥಿಯನ್ನು ರಮೇಶ ಜಾರಕಿಹೊಳಿ ಸೋಲಿಸಿದ್ರು. ಈ ಸಲ ಸಹೋದರ ಲಖನ್ ಅವರನ್ನು ನಿಲ್ಲಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ರು ಅಚ್ಚರಿ ಇಲ್ಲ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಸವದತ್ತಿ ಮತ್ತು ರಾಮದುರ್ಗ ಪಂಚಾಯಿತಿ ಸದಸ್ಯರ ಸಮ್ಮಿಲನ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
” ಸಿದ್ದರಾಮಯ್ಯ ಮೋಸ ಮಾಡಿದ್ದಾರೆಂದು ಎಲ್ಲ ಕಡೆ ರಮೇಶ್  ಹೇಳುತ್ತಿದ್ದಾರೆ. ಕುರುಬ ಸಮಾಜದ ವಿವೇಕರಾವ್ ಪಾಟೀಲರಿಗೆ ಮೋಸ ಮಾಡಿದ್ದಾರೆ ಎನ್ನುತ್ತಾರೆ. ರಮೇಶ್ ಬ್ಯಾಗ್ ಹಿಡಿದುಕೊಂಡು ತಿರುಗಾಡುವ ಗಿರಾಕಿ, ಕಾಂಗ್ರೆಸ್ ಪಕ್ಷವನ್ನೇ ಸೇರಿಲ್ಲ. ಅಂತವರಿಗೆ ಟಿಕೆಟ್ ಕೊಡುವುದು ಹೇಗೆ .?. ವಸಂತರಾವ್ ಪಾಟೀಲ್ ಮಗ ಎನ್ನುವ ಕಾರಣಕ್ಕೆ ವಿವೇಕರಾವಗೆ ಟಿಕೆಟ್ ಕೊಡಲು ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
” ಕಾಂಗ್ರೆಸ್ ಪಕ್ಷದಲ್ಲಿ ಕುರುಬ ಸಮುದಾಯದ ಮೂರು ಜನರಿಗೆ ಟಿಕೆಟ್ ಕೊಟ್ಟಿದೆ. ಬಿಜೆಪಿಯಲ್ಲಿ ಎಷ್ಟು ಜನರಿಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ರಮೇಶ್ ಜಾರಕಿಹೊಳಿ ಆಡಿದ್ದೇ ಆಟ ಎನ್ನುವ ಕಾಲ ಆಗಿ ಹೋಗಿದೆ. ಸಿದ್ಧಾಂತ, ಪಕ್ಷದ ಆಧಾರದ ಮೇಲೆ ರಾಜಕೀಯ ಮಾಡಬೇಕು. ಸ್ವಾರ್ಥಕ್ಕಾಗಿ  ರಾಜಕೀಯ ಮಾಡಬಾರದು‌” ಎಂದು ಕಿಡಿಕಾರಿದರು.
ಹೊಟ್ಟೆ ಉರಿಯಿಂದ ಅಕ್ಕಿ ಕಡಿತ :
” ಬಿಜೆಪಿ ಸರ್ಕಾರ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದ್ದಾರೆ. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರಪ್ಪನ ಮನೆಯಿಂದ ಕೊಡ್ತಾ ಇದ್ರಾ ?. ಜನರ ದುಡ್ಡಿನಿಂದ ಕೊಡುತ್ತಿದ್ದರು. ಆದರೆ ಹೊಟ್ಟೆ ಊರಿಯಿಂದ ಯೋಜನೆಯ ಅಕ್ಕಿ ಕಡಿತ ಮಾಡಿದ್ದಾರೆ. ನನ್ನ ಅವಧಿಯಲ್ಲಿ 5 ವರ್ಷದಲ್ಲಿ 15 ಲಕ್ಷ ಮನೆಗಳ ಮನೆ ನಿರ್ಮಾಣ ಮಾಡಿದ್ದೇವೆ. ರಾಮದುರ್ಗ ಶಾಸಕರೂ 12 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಈಗಿರುವ ಆಸಾಮಿ ಎಷ್ಟು ಮನೆಗಳನ್ನು ನೀಡಿದ್ದಾರೇ ?. ಒಂದೂ ಮನೆ ನೀಡದವರಿಗೆ ವೋಟ್ ಹಾಕಬೇಕಾ ಎಂದು ನೀವೇ ಯೋಚಿಸಿ ” ಎಂದರು.
ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಕಿತ್ತಾಕಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. 2 ವರ್ಷ 4 ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ಕೆಲಸವನ್ನಾದ್ರು ಮಾಡಿದ್ದಾರಾ ಹೇಳಿ. ಮಾನ, ಮರ್ಯಾದೆ ಬಿಟ್ಟು ಮತ ಕೇಳುತ್ತಿದ್ದಾರೆ. ಮುಖಕ್ಕೆ ಮಂಗಳಾರತಿ ಮಾಡಿ ಬಿಜೆಪಿಯವರನ್ನು ಕಳಸಿ” ಎಂದು ಹೇಳಿದರು.
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ :
” ಬಿಜೆಪಿಯ ಭ್ರಷ್ಟಾಚಾರ , ದುರಾಡಳಿತದಿಂದ ದೇಶ, ರಾಜ್ಯದ ಜನರು ಬೇಸತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರದ ಕೊಡುಗೆ. ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್. ಆದರೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು ? ” ಎಂದು ಪ್ರಶ್ನಿಸಿದರು.
” ದುಡ್ಡು ಹಂಚಿ, ಆಪರೇಷನ್ ಕಮಲ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.  ಬೆಲೆ ಏರಿಕೆಯಿಂದ ಜನರ ತತ್ತರಿಸಿದ್ದಾರೆ. ಇಂತಹ ಸರ್ಕಾರ ಬೇಕಾ ? ಬಿಜೆಪಿಯನ್ನು ದಯಮಾಡಿ ಕಿತ್ತು ಎಸೆಯಿರಿ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ ” ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಗಾಂಧಿಜೀಯನ್ನು ಕೊಂದು ಹಾಕಿದ್ದು ಆರ್ ಎಸ್ ಎಸ್ :
ಸ್ವಾರ್ಥಕ್ಕಾಗಿ, ಹೆದರಿಸಿ ರಾಜಕಾರಣ ಮಾಡುವುದಲ್ಲ. ಸ್ವಾತಂತ್ರ್ಯಕ್ಕಾಗಿ ಒಬ್ಬರಾದರೂ ಹುತಾತ್ಮರಾಗಿದ್ದಾರಾ ? ಬಿಜೆಪಿಯವರು ನಮಗೆ ದೇಶ ಭಕ್ತಿ ಹೇಳಿಕೊಡ್ತಿದ್ದಾರೆ‌‌. ಗಾಂಧೀಜಿಯವರನ್ನ ಕೊಂದು ಹಾಕಿದವರು ಇದೇ ಆರ್‌ಎಸ್‌ಎಸ್​ನವರು. ಗೋಡ್ಸೆ ಪಳೆಯುಳಿಕೆಗಳೇ ಈಗಿನ ಆರ್‌ಎಸ್‌ಎಸ್, ಬಿಜೆಪಿಯವರು.
ನರೇಂದ್ರ ಮೋದಿ ಆರ್‌ಎಸ್‌ಎಸ್​ನಿಂದ ಬಂದವರು. ಈ ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್​ನಿಂದ ಬಂದಿಲ್ಲ. ಲಾಟರಿ ಹೊಡೆದು ಸಿಎಂ ಆಗಿದ್ದಾರೆ. ಇವರನ್ನು ಕಿತ್ತು ಹಾಕಲು ಈಶ್ವರಪ್ಪ ಮಾತಾಡ್ತಿದ್ದಾನೆ ಎಂದು ಏಕವಚನದಲ್ಲಿ ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣಾ ವೀಕ್ಷಕರು, ಶಾಸಕರೂ ಆಗಿರುವ ಎನ್.ಎ.ಹ್ಯಾರಿಸ್ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮಾಜಿ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ, ವಿಶ್ವಾಸ ವೈದ್ಯ , ಸಂಚನಗೌಡ ದ್ಯಾಮನಗೌಡ, ರವಿ ಯಲಿಗಾರ, ಆರ್.ಬಿ.ಪಾಟೀಲ, ಸೌರಭ ಚೋಪ್ರಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚನ್ನರಾಜ್ ಹಟ್ಟಿಹೊಳಿ ಲಕ್ಷ್ಮೀ ಹೆಬ್ಬಾಳಕರ್  ತಮ್ಮ ಅಂತ ಟಿಕೆಟ್ ಕೊಟ್ಟಿಲ್ಲ 

ಸೋನಿಯಾ ಗಾಂಧಿಯವರು ಮನಸ್ಸು ಮಾಡಿದರೆ ಈ ದೇಶದ ಪ್ರಧಾನಿ ಆಗಬಹುದಿತ್ತು. ಆದರೆ ಅವರು ದೇಶದ ಅಭಿವೃದ್ಧಿಗಾಗಿ ಆರ್ಥಿಕ ತಜ್ಞ ಡಾ. ಮನ್ ಮೋಹನ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿ ತಾವು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಉಳಿದು ಅಧಿಕಾರಕ್ಕೆ ಆಸೆ ಪಡಲಿಲ್ಲಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ  ಸವದತ್ತಿ ಮತ್ತು ರಾಮದುರ್ಗ ಗ್ರಾಮ ಪಂಚಾಯತ್ ಸದಸ್ಯರ ಸಮ್ಮಿಲನ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಗಾಂಧಿ ಕುಟುಂಬದ ಕೊಡುಗೆ ಅಪಾರವಾಗಿದೆ. ಆದರೆ ಬಿಜೆಪಿ ಮಾತ್ರ ಹೊಟ್ಟೆಕಿಚ್ಚಿನಿಂದ ಗಾಂಧಿ ಕುಟುಂಬದ ಬಗ್ಗೆ ಆರೋಪ ಮಾಡುತ್ತದೆ ಎಂದರು.
ಚನ್ನರಾಜ್ ಹಟ್ಟಿಹೊಳಿ ಲಕ್ಷ್ಮೀ ಹೆಬ್ಬಾಳಕರ್  ತಮ್ಮ ಅಂತ ಟಿಕೆಟ್ ಕೊಟ್ಟಿಲ್ಲ.  ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದೇವೆ. ಚನ್ನರಾಜ್ ಹಟ್ಟಿಹೊಳಿ ಯುವಕ, ಇಂಜನಿಯರಿಂಗ್ ಪದವೀಧರನಾಗಿದ್ದಾನೆ. ನಿಮ್ಮ ಪರ ಪರಿಷತ್ ನಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಮುಂದಿನ ದಿನದಲ್ಲಿ ಸವದತ್ತಿ, ರಾಮದುರ್ಗದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಪ್ರಾಶಸ್ತ್ಯ ಚಲಾವಣೆ ಬಗ್ಗೆ ಪಂಚಾಯತಿ ಸದಸ್ಯರಿಗೆ ತರಬೇತಿ ನೀಡಬೇಕು. ಕಳೆದ ಚುನಾವಣೆಯಲ್ಲಿ 800 ಕ್ಕೂ ಹೆಚ್ಚು ಮತಗಳು ತಿರಸ್ಕೃತ ಆಗಿದೆ. ಈ ಸಲ ಹಾಗೇ ಆಗದಂತೆ ಎಚ್ಚರಿಕೆ ವಹಿಸಬೇಕು. ಸ್ವಾಭಿಮಾನದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಬೇಕು ಎಂದು ಕರೆ ನೀಡಿದರು.

ಒಂದೇ ಒಂದು ಮತ ನೀಡಬೇಕು – ಸತೀಶ್ ಜಾರಕಿಹೊಳಿ

ಸಂಗ್ರಹ ಚಿತ್ರ

ಕಾಂಗ್ರೆಸ್ ಪಕ್ಷ  ವಿಧಾನಪರಿಷತ್ ಚುನಾವಣಾ ಕಣಕ್ಕಿಳಿಸಿರುವ ಯುವ ಉತ್ಸಾಹಿ ನಾಯಕ ಚನ್ನರಾಜ್ ಹಟ್ಟಿಹೊಳಿ ಅವರಿಗೆ ತಮ್ಮ ಒಂದೇ ಒಂದು ಮತ ನೀಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿನಂತಿಸಿದರು.

ಬೆಳಗಾವಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ  ಸವದತ್ತಿ ಮತ್ತು ರಾಮದುರ್ಗ ಪಂಚಾಯಿತಿ ಸದಸ್ಯರ ಸಮ್ಮಿಲನ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಸೆಂಬರ 10ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪರ ಮತಯಾಚನೆಗೆ ಕಾಂಗ್ರೆಸ್ ಸಮಾವೇಶ ನಡೆಸಲಾಗುತ್ತಿದೆ. ಈಗಾಗಲೇ ತಾವು, ಶಾಸಕಿ ಹೆಬ್ಬಾಳಕರ ಇಡೀ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಕಾಂಗ್ರೆಸ್ ಸರ್ಕಾರದ ಕಾರ್ಯ, ಅಭ್ಯರ್ಥಿ ಬಗ್ಗೆ ಹಾಗೂ ಬಿಜೆಪಿ  ಆಡಳಿತ ವೈಪಲ್ಯ ತಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರು, ಮುಖಂಡರು ಒಗ್ಗೂಡಿ ಉತ್ಸಾಹಿಯಾಗಿರುವ ಚನ್ನರಾಜ್ ಹಟ್ಟಿಹೊಳಿ ಅವರನ್ನು ಅಖಾಡಕ್ಕೆ ಇಳಿಸಲಾಗಿದೆ. ಆದ್ದರಿಂದ ಪಂಚಾಯಿತಿ ಸದಸ್ಯರು ಆಶೀರ್ವಾದ ಮಾಡಬೇಕು. ಅವರಿಗೆ ತಮ್ಮ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಚುನಾವಣೆ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಲಿದೆ. ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಆದ್ದರಿಂದ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಹೆಚ್ಚಿನ ಮತಗಳಿಂದ ಗೆಲ್ಲಿಸೋಕೆ ಸಹಕರಿಸುತ್ತಿರೆಂದು ಭಾವಿಸಿರುತ್ತೇನೆ ಎಂದು ಹೇಳುವ ಮೂಲಕ ಮತ ನೀಡುವಂತೆ ವಿನಂತಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣಾ ವೀಕ್ಷಕ, ಶಾಸಕರೂ ಆಗಿರುವ ಎನ್.ಎ.ಹ್ಯಾರಿಸ್ , ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮಾಜಿ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button