ಪ್ರಗತಿವಾಹಿನಿಗೆ ಮಾಹಿತಿ ನೀಡಿದ ಚೇತನ್ ಪತ್ನಿ ಮೇಘಾ: ಪೊಲೀಸರ ವಶದಲ್ಲಿ ಚೇತನ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಸ್ಯಾಂಡಲ್ ವುಡ್ ನಟ ಚೇತನ್ ಅವರು ಪೊಲೀಸರ ವಶದಲ್ಲಿರುವುದು ಖಚಿತವಾಗಿದೆ ಎಂದು ಚೇತನ್ ಪತ್ನಿ ಮೇಘಾ  ತಿಳಿಸಿದ್ದಾರೆ.

ಪೊಲೀಸ್ ಕಮಿಶನರ್ ಕಚೇರಿಯಿಂದಲೇ ಪ್ರಗತಿವಾಹಿನಿ ಜೊತೆ ಮಾತನಾಡಿದ ಮೇಘಾ, ಟ್ವೀಟ್ ಒಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಚೇತನ್ ಮೇಲೆ ಪ್ರಕರಣ ದಾಖಲಿಸಿರುವ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ಯಾವ ಠಾಣೆಯಲ್ಲಿ ಅವರನ್ನು ಇಡಲಾಗಿದೆ ಎನ್ನುವ ಕುರಿತು ವಿವರ ನೀಡಿಲ್ಲ ಎಂದರು.

ಚೇತನ್ ಅವರನ್ನು ಹುಡುಕಿಕೊಡುವಂತೆ ನಾನು ಲಿಖಿತ ಮನವಿ ಸಲ್ಲಿಸಿದ್ದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೂರ್ಣ ವಿವರವನ್ನು ಇನ್ನೂ ನೀಡಿಲ್ಲ. ಈಗ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ತೆರಳುತ್ತಿದ್ದೇವೆ ಎಂದಿದ್ದಾರೆ.

ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರಿಗೆ ಸಂಬಂಧಿಸಿದಂತೆ ಮಾಡಲಾದ ಟ್ವೀಟ್ ಒಂದರ ಹಿನ್ನೆಲೆಯಲ್ಲಿ ಚೇತನ್ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಹಿನ್ನೆಲೆ

ಮಧ್ಯಾಹ್ನದಿಂದ ನಟ ಚೇತನ್ ಕಾಣಿಸುತ್ತಿಲ್ಲ. ಶೇಷಾದ್ರಿಪುರಂ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿರುವ ಬಗ್ಗೆ ಅನುಮಾನವಿದೆ. ಸ್ಥಳೀಯರು ಹೇಳುವ ಪ್ರಕಾರ ಪೊಲೀಸರು ಬಂದು ಅವರನ್ನು ಕರೆದೊಯ್ದಿದ್ದಾರೆ ಎನ್ನುತ್ತಿದ್ದಾರೆ. ಆದರೆ ದೂರು ನೀಡಿದರೆ ಪೊಲೀಸರು ಕೂಡ ಸ್ಪಂದಿಸುತ್ತಿಲ್ಲ ಎಂದು  ಫೇಸ್ ಬುಕ್ ಲೈವ್ ನಲ್ಲಿ  ನಟ ಚೇತನ್ ಪತ್ನಿ ಮೇಘಾ ದೂರಿದ್ದರು.

ತಮ್ಮ ಪತಿ ಚೇತನ್ ಕಾಣಿಸುತ್ತಿಲ್ಲ, ಮಧ್ಯಾಹ್ನ ಶೇಷಾದ್ರಿಪುರಂ ಪೊಲೀಸರು ಬಂದು ಚೇತನ್ ಅವರನ್ನು ಕರೆದೊಯ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದರೆ ಅಲ್ಲಿಯೂ ಕೂಡ ಚೇತನ್ ಇಲ್ಲ. ಚೇತನ್ ನಾಪತ್ತೆಯಾಗಿದ್ದಾರೆ, ಕಾಣಿಸುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದ್ದರು..

ಈ ಬೆಳವಣಿಗೆ ನೋಡಿದರೆ ತಮಗೆ ಆತಂಕವುಂಟಾಗುತ್ತಿದೆ. ಚೇತನ್ ಅವರನ್ನು ಯಾರಾದರೂ ಅಪಹರಿಸಿದ್ದಾರಾ? ಅಥವಾ ಪೊಲೀಸರೇ ಅವರನ್ನು ಬೇರೆಡೆ ಕರೆದೊಯ್ದಿದ್ದಾರಾ? ಎಂಬುದು ಗೊತ್ತಾಗುತ್ತಿಲ್ಲ. ಮಧ್ಯಾಹ್ನದಿಂದ ಚೇತನ್ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು.

ಈ ಕುರಿತು ಪ್ರಗತಿವಾಹಿನಿ ಪ್ರಕಟಿಸಿದ ಸುದ್ದಿ ಗಮನಿಸಿದ ಮೇಘಾ, ಚೇತನ್ ಸುಳಿವು ಸಿಕ್ಕಿದೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾಗಿ ಹೇಳುತ್ತಿದ್ದಾರೆ. ಪೊಲೀಸ್ ಆಯುಕ್ತರು ಮಾಹಿತಿ ನೀಡುತ್ತಿದ್ದಾರೆ. ಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಸ್ಯಾಂಡಲ್ ವುಡ್ ನಟ ಚೇತನ್ ನಾಪತ್ತೆ; ಪತ್ನಿ ಕಣ್ಣೀರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button