
ಖಾನಾಪುರ ತಾಲೂಕು ಆಸ್ಪತ್ರೆಯ ತಂಡದಿಂದ ಕಾರ್ಯಾಚರಣೆ: ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುತ್ತಿದ್ದ ಇಬ್ಬರ ವಿರುದ್ಧ ದೂರು ದಾಖಲು
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಂದಾಯ ಇಲಾಖೆಯಿಂದ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ಅಗತ್ಯವಿರುವ ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ವಿತರಿಸುವ ಜಾಲವೊಂದನ್ನು ತಾಲೂಕು ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ಸೋಮವಾರ ಪತ್ತೆ ಹಚ್ಚಿದೆ.
ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯೂ ಆದ ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಾಲೂಕು ಆಸ್ಪತ್ರೆಯ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ತಾಲೂಕಿನ ಮೆಂಡೇಗಾಳಿ ಗ್ರಾಮದ ನಿವಾಸಿ ವಾಸು ಮಾರುತಿ ಗುರವ ಮತ್ತು ತಾಲೂಕು ಆಸ್ಪತ್ರೆಯ ಸಿಬ್ಬಂದಿ ಇಸ್ಮಾಯಿಲ್ ರಿಯಾಜಹ್ಮದ ಬೀಡಿಕರ ಎಂಬಿಬ್ಬರನ್ನು ದಾಖಲೆ ಸಮೇತ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.
ತಾಲೂಕು ವೈದ್ಯಾಧಿಕಾರಿಗಳು ನೀಡಿರುವ ದೂರಿನನ್ವಯ ಇವರಿಬ್ಬರ ವಿರುದ್ಧ ಖಾನಾಪುರ ಪೊಲೀಸರು ಐಪಿಸಿ ಸೆಕ್ಷನ್ ೪೬೫, ೪೬೮, ೪೭೧ ಅಡಿ ಪ್ರಕರಣ ದಾಖಲಾಗಿದೆ.
ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರ ವಿಚಾರಣೆ ನಡೆಸಿದ್ದು, ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಇಸ್ಮಾಯಿಲ್ ನೀಡಿದ ಮಾಹಿತಿಯಂತೆ ಆತನ ಮನೆಗೆ ತೆರಳಿದ ಪೊಲೀಸರು ಆತನ ಮನೆಯಲ್ಲಿದ್ದ ತಾಲೂಕು ಆಸ್ಪತ್ರೆಯ ವೈದ್ಯರ, ತಾಲೂಕು ಆರೋಗ್ಯಾಧಿಕಾರಿಗಳ ಮತ್ತು ಆಸ್ಪತ್ರೆಯ ನಕಲಿ ರಬ್ಬರ್ ಸ್ಟಾಂಪ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಇವರಿಬ್ಬರೂ ಈ ಪ್ರಕರಣದಲ್ಲಿ ಮತ್ತಷ್ಟು ಜನರು ಶಾಮೀಲಾಗಿರುವ ಕುರಿತು ಮಾಹಿತಿ ನೀಡಿದ್ದು, ಇವರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇತ್ತ ಆರೋಗ್ಯ ಇಲಾಖೆಯೂ ಇಸ್ಮಾಯಿಲ್‌ನನ್ನು ಕೆಲಸದಿಂದ ವಜಾಗೊಳಿಸಿದ್ದು, ಆತನ ವಿರುದ್ಧ ಇಲಾಖಾ ತನಿಖೆಯನ್ನೂ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಕಲಾ ಕಾಲೇಜಿನ ಡೀನ್ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ