Latest

ಆಗಸ್ಟ್ 15 ರೊಳಗೆ 10 ಸಾವಿರ ಜನರಿಗೆ ಉದ್ಯೋಗ: ಸಿಎಂ ಬೊಮ್ಮಾಯಿ ಭರವಸೆ

ಪ್ರಗತಿವಾಹಿನಿ ಸುದ್ದಿ; ಹಾವೇರಿ:  ಮುಂದಿನ ಆಗಸ್ಟ್ 15 ರೊಳಗೆ ಶಿಗ್ಗಾಂವಿಯಲ್ಲಿ 10 ಸಾವಿರ ಜನರಿಗೆ ಉದ್ಯೋಗ ನೀಡುವ ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿಗ್ಗಾಂವಿಯಲ್ಲಿ ಟೆಕ್ಸಟೈಲ್ ಪಾರ್ಕ್ ನ ವಿವಿಧ ಕಾಮಗಾರಿಗಳಿಗೆ, ಸಿದ್ದ ಉಡುಪು ಘಟಕದ ನಿರ್ಮಾಣ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ- 4 ರಿಂದ ಕಲ್ಯಾಣ ರಸ್ತೆ ಅಗಲೀಕರಣ ಹಾಗೂ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಎರಡು ಮೂರು ವರ್ಷಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಉದ್ಯೋಗ ನೀಡುವ ಉದ್ದಿಮೆಗಳು, ವಿಶೇಷವಾಗಿ ಹೆಣ್ಣಮಕ್ಕಳಿಗೆ ಉದ್ಯೋಗ ಒದಗಿಸುವ ಗಾರ್ಮೆಂಟ್ ಕಾಖಾನೆಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಶಿಗ್ಗಾವಿಯ ಟೆಕ್ಸ್ ಪೋರ್ಟ್ ನ ವತಿಯಿಂದ ಮೊದಲ ಹಂತದಲ್ಲಿ ಮೂರು ಸಾವಿರ ಹಾಗೂ ಎರಡನೇ ಹಂತದಲ್ಲಿ 5 ಸಾವಿರ ಉದ್ಯೋಗವನ್ನು ನೀಡಲಿದೆ. ಜವಳಿ ಪಾರ್ಕ್ ನಿಂದ ಒಟ್ಟು 10 ಸಾವಿರಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ. ಇದು ಸುಲಭದ ಮಾತಲ್ಲ. ಬೇರೆ ಯಾವ ಉದ್ಯಮಗಳಾಗಲಿ, ಸರ್ಕಾರದಿಂದಾಗಲಿ ಇದು ಸಾಧ್ಯವಿಲ್ಲ. ಈ ಉದ್ಯಮಗಳಿಗೆ ರಫ್ತು ಮಾಡುವ ವಿಪುಲ ಅವಕಾಶವಿದೆ. ಇಡೀ ವಿಶ್ವ ಇಂದು ಭಾರತದ ಗಾರ್ಮೆಂಟ್ ಉದ್ಯಮದತ್ತ ನೋಡುತ್ತಿದೆ. ಕೇವಲ ಬೆಂಗಳೂರು, ಮುಂಬೈಯಂಥ ನಗರಗಳಲ್ಲಿ ಹೆಪ್ಪುಗಟ್ಟಲು ಬಿಡದೆ ಗ್ರಾಮಗಳಲ್ಲಿ ಇದು ಸಾಧ್ಯವಾಗಬೇಕು. ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಎಲ್ಲಾ ತಾಲೂಕುಗಳಲ್ಲಿ ಜವಳಿ ಪಾರ್ಕ್‍ಗಳ ಸ್ಥಾಪನೆ
ಜವಳಿ ಕೈಗಾರಿಕೆಯಲ್ಲಿ ಹೆಚ್ಚಿನ ಜನರಿಗೆ ಕೆಲಸ ಸಿಗುತ್ತದೆ. ಬೆಂಗಳೂರಿನಲ್ಲಿಯೇ 10 ಲಕ್ಷಕ್ಕಿಂತ ಹೆಚ್ಚು ಜನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ 90 ರಷ್ಟು ಹೆಣ್ಣುಮಕ್ಕಳು ಇಂದು ಕುಟುಂಬಕ್ಕೆ ಕೊಡುವ ಶಕ್ತಿ ದುಡಿಮೆಯಿಂದ ಬಂದಿದೆ. ಉತ್ತರ ಕರ್ನಾಟಕದ ಎಲ್ಲ ತಾಲ್ಲೂಕುಗಳಲ್ಲ ಆಗಬೇಕೆಂಬ ಕನಸು ನನ್ನದು. ಇಂತಹ ಜವಳಿ ಪಾರ್ಕ್‍ಗಳನ್ನು ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗುವುದು. ಸ್ವಲ್ಪ ಸಮಯದ ಅವಶ್ಯಕತೆ ಇದೆ ಎಂದರು.

ವಿದ್ಯೆ –ಉದ್ಯೋಗ ನಮ್ಮ ಬದುಕಿನ ಭವ್ಯ ಭವಿಷ್ಯದ ಅಸ್ತ್ರಗಳು
ವಿದ್ಯೆ –ಉದ್ಯೋಗ ನಮ್ಮ ಬದುಕಿನ ಭವ್ಯ ಭವಿಷ್ಯಕ್ಕಾಗಿ ಇರುವ ಅಸ್ತ್ರಗಳು. ಇಲ್ಲೇ ಉದ್ಯೋಗ ಸೃಷ್ಟಿಯಾದರೆ, ರೈತರ ಹೆಣ್ಣುಮಕ್ಕಳಿಗೆ ಆರ್ಥಿಕ ಸಬಲೀಕರಣವಾಗುತ್ತದೆ. ಆದಾಯ ಹೆಚ್ಚಾಗುತ್ತದೆ. ಅವರು ಸ್ವಾಭಿಮಾನದ ಬದುಕು ಬದುಕಬಹುದು. ಹೆಚ್ಚು ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲಾಗುವುದು. ರೈತರು ಬೆಳೆದ ಪದಾರ್ಥಗಳ ಆಗ್ರೋ ಕೈಗಾರಿಕೆಗಳಿಗೆ ಮಹತ್ವ ನೀಡಲಾಗಿದೆ. ರೈತರು ಬೆಳೆದ ಪದಾರ್ಥಗಳನ್ನು ಸಂಸ್ಕರಿಸಿದರೆ ಹೆಚ್ಚಿನ ಬೆಲೆ ದೊರೆಯುತ್ತದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಗುಜರಾತ್‍ನ ಅಂಬುಜಾ ಕಾರ್ಖಾನೆ ಇದೆ. ಎಥನಾಲ್ ಕಾರ್ಖಾನೆ ಸೆಪ್ಟೆಂಬರ್ ಮಾಹೆಯಲ್ಲಿ ಬರುತ್ತಿದೆ. ಅಲ್ಲಿಯೂ 2 ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ, ಪರಿಣಿತಿ ನೀಡಿ ಅವರೂ ಬದುಕಿನಲ್ಲಿ ಮುಂದೆ ಬರಬೇಕೆಂಬ ಆಶಯದೊಂದಿಗೆ ಈ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.

ಶಿಗ್ಗಾಂವ ತಾಲ್ಲೂಕಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ :
ಟೆಕ್ಸ್‍ಟೈಲ್ ಪಾರ್ಕ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಲಾಗುವುದು. ಶಿಗ್ಗಾಂವ ತಾಲ್ಲೂಕಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಸುಮಾರು 29 ಕೋಟಿರೂ. ವೆಚ್ಚದಲ್ಲಿ ಡಿಪೋ, 200 ಕೋಟಿ ವೆಚ್ಚದಲ್ಲಿ ಆಸ್ಪತ್ರೆ, ಜಿಟಿಟಿಸಿ, ಕೋಲ್ಡ್ ಸ್ಟೋರೇಜ್ , ವಸತಿ ಶಾಲೆಗಳು, ಹೊಸ ಪಿಯು ಕಾಲೇಜು, ಮನೆಗಳ ನಿರ್ಮಾಣ ಕೈಗೊಳ್ಳಲಿದ್ದೇವೆ. ಸುಮಾರು 3000 ಮನೆಗಳನ್ನು ಬಂಕಾಪುರ, ಶಿಗ್ಗಾಂವಿ, ಸವಣೂರುನಲ್ಲಿ ಕಟ್ಟಲಾಗುತ್ತಿದೆ. ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ಅಭಿವೃದ್ಧಿ ವೇಗ ಉತ್ತುಂಗಕ್ಕೆ ಬರುತ್ತಿದ್ದು, ಅದರ ಪ್ರತಿಫಲ ರೈತರಿಗಾಗಬೇಕು. 3-4 ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆವಿಮೆ ಬಂದಿಲ್ಲದಿರುವುದನ್ನು ಗಮನಿಸಲಾಗಿದೆ. ಬೆಳೆಗಳ ಮರುಸಮೀಕ್ಷೆ ನಡೆಸಿ ಶೀಘ್ರ ಬೆಳೆವಿಮೆ ನೀಡಲು ಆದೇಶ ನೀಡಲಾಗಿದೆ ಎಂದರು.

2023 ಜನವರಿ ಅಂತ್ಯದೊಳಗೆ ಟೆಕ್ಸ್‍ಟೈಲ್ ಪಾರ್ಕ್‍ನಲ್ಲಿ ಉತ್ಪಾದನೆ ಪ್ರಾರಂಭ:
ಕೃಷಿ, ಕೈಗಾರಿಕೆ, ಸೇವಾ ವಲಯದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ರೂಪಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ಆಂಕರ್ ಬ್ಯಾಂಕಿನ ಮೂಲಕ 1.50 ಲಕ್ಷಗಳ ಆರ್ಥಿಕ ನೆರವು, ಪ್ರಾಜೆಕ್ಟ್‍ಗಳನ್ನು ಒದಗಿಸಿ, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಯೋಜನೆಗೆ ಜುಲೈ 28 ರಂದು ಉದ್ಘಾಟನೆ ಮಾಡಲಿದ್ದೇನೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡಲು ಪ್ರಾಶಸ್ತ್ಯ ನೀಡಲಾಗಿದೆ. ರಾಜ್ಯದ ಶೈಕ್ಷಣಿಕ ಕೇಂದ್ರಗಳಲ್ಲಿ ತಲಾ 1000 ವಿದ್ಯಾರ್ಥಿಗಳಿಗೆ ದೀನದಯಾಳ್ ಉಪಾಧ್ಯಾಯ ವಸತಿ ಸಮುಚ್ಛಯ, ಹಾವೇರಿಯಲ್ಲಿ 1000 ಎಕರೆಯ ಇಂಡಸ್ಟ್ರಿಯಲ್ ಟೌನ್ ನಿರ್ಮಾಣ ಕೈಗೊಳ್ಳಲಿದ್ದು ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿ ನಡೆಯುತ್ತಿದೆ.ಯಾವುದೇ ಬೇಧವಿಲ್ಲದೇ ಸಮಗ್ರ ತಾಲ್ಲೂಕಿನ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು. ಆಸಕ್ತರು ಅಕ್ಟೋಬರ್ ತಿಂಗಳಿನಿಂದ ತರಬೇತಿ ಪಡೆಯಬಹುದಾಗಿದ್ದು, ಜನವರಿ ಅಂತ್ಯದೊಳಗೆ ಟೆಕ್ಸ್ ಟೈಲ್ ಪಾರ್ಕ್‍ನಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ. ಉದ್ಯೋಗದಿಂದ ಸ್ವಾಭಿಮಾನದ ಬದುಕನ್ನು ಬದುಕಬಹುದು. ಸರ್ಕಾರದ ಈ ಎಲ್ಲ ಕಾರ್ಯಕ್ರಮಗಳಿಗೆ ಜನರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಪಿಎಂ ಆವಾಸ್ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣ:

ಹುಬ್ಬಳ್ಳಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಡಿ 18 ಲಕ್ಷ ಮನೆಗಳ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿನ ಪ್ರವಾಹಕ್ಕೆ ಸಿಲುಕುವ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಸರ್ಕಾರ ವಿವಿಧ ಯೋಜನೆಗಳಲ್ಲಿ ಮನೆಗಳ ನಿರ್ಮಾಣ ಕೈಗೊಂಡಿದೆ. ಹಿಂದಿನ ಸರ್ಕಾರದ ತಾಂತ್ರಿಕ ತಪ್ಪಿನಿಂದ 18 ಲಕ್ಷ ಮನೆಗಳ ಮಂಜೂರಾತಿ ನಿಂತುಹೋಗಿತ್ತು. ಈಗ ಅವುಗಳನ್ನು ಸರಿಪಡಿಸಿ ಅಪ್ ಲೋಡ್ ಮಾಡಲಾಗಿದೆ. ಸರ್ಕಾರದಿಂದ ಸಮಾನ ಮೊತ್ತವನ್ನು ನೀಡಲಾಗುವುದು ಎಂದರು.

ಸಚಿವರಿಂದ ಪರಿಶೀಲನೆ
ಬಹುತೇಕ ಎಲ್ಲಾ ಸಚಿವರು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ ಎಂದರು.
ಅಕ್ರಮ ಸಿಲಿಂಡರ್ ರಿಫಿಲ್ಲಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಈ ಬಗ್ಗೆ ದಾಳಿ ಮಾಡಿ ನಿಯಂತ್ರಣ ಮಾಡಲು ಸೂಚನೆ ನೀಡುವುದಾಗಿ ತಿಳಿಸಿದರು.

ಪರಿಹಾರ ಕ್ರಮಗಳ ಕುರಿತು ಸೂಚನೆ
ಬೀದರ್, ಬೆಳಗಾವಿ, ರಾಯಚೂರು ಜಿಲ್ಲೆಗಳಿಂದ ವರದಿಗಳನ್ನು ತರಿಸಿಕೊಂಡಿದ್ದು ಕೆಲವು ಆದೇಶಗಳನ್ನು ತರಿಸಿಕೊಳ್ಳಲಾಗಿದೆ. ಕೆಲವು ಆದೇಶಗಳನ್ನು ಸಹ ನೀಡಲಾಗಿದೆ. ನದಿ ಪಾತ್ರಗಳಲ್ಲಿ ನೀರು ಹೆಚ್ಚಾಗಿ ಹರಿಯುವ ಸಂಭವಿದ್ದೆಡೆಗಳಲ್ಲಿ ವಿಶೇಷವಾಗಿ ಬೀದರ್ ಮತ್ತು ಮಹಾರಾಷ್ಟ್ರ ರಾಜ್ಯ ದಿಂದ ಜಲಾಶಯಗಳ ನೀರು ಹೊರಬಿಡುವ ಬಗ್ಗೆ ಅಲ್ಲಿನ ಅಧಿಕಾರಿಗಳ ಸಂಪರ್ಕವಿರಬೇಕು. ನೀರಿನ ಹರಿವಿನ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡು ಇಲ್ಲಿ ಸ್ಥಳಾಂತರ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದೆ. ಒಂದು ವ್ಯವಸ್ಥೆ ಸೃಜಿಸಬೇಕೆಂದು ಸೂಚಿಸಿದೆ. ಮನೆಗಳು ಬಿದ್ದರೆ ತುರ್ತು ಪರಿಹಾರವಾಗಿ 10 ಸಾವಿರ ರೂ.ಗಳನ್ನು ನೀಡಬೇಕು, ಪೂರ್ಣಪ್ರಮಾಣದಲ್ಲಿ ಬಿದ್ದರೆ 5 ಲಕ್ಷ, ತೀವ್ರ ಹಾನಿಗೆ 3 ಲಕ್ಷ ಹಾಗೂ ಅಲ್ಪ ಪ್ರಮಾಣದ ಹಾನಿಗೆ 50 ಸಾವಿರ ರೂ.ಗಳನ್ನು ಒದಗಿಸಲು ಸೂಚಿಸಿದೆ. ಬೆಳೆಹಾನಿಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕು 13600 ಕೇಂದ್ರ ಸರ್ಕಾರದ ಮೊತ್ತ ಸೇರಿ ಒಟ್ಟು 25 ಸಾವಿರ ರೂ.ಗಳು, ತೋಟಗಾರಿಕಾ ಬೆಳೆಗೆ 18 ಸಾವಿರಕ್ಕೆ 28 ಸಾವಿರ ನೀಡಿ ಆದೇಶವನ್ನು ಹೊರಡಿಸಿದೆ. ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ರಸ್ತೆ , ಸೇತುವೆ, ಕಲ್ವರ್ಟ್ ದುರಸ್ತಿಗೆ 500 ಕೋಟಿ ರೂ.ಗಳನ್ನು ಒದಗಿಸಿದೆ. ಪ್ರವಾಹ ಪರಿಸ್ಥಿತಿ ಗೆ ಕೂಡಲೇ ಸ್ಪಂದಿಸಬೇಕು, ಎಲ್ಲಾ ಇಲಾಖೆಗಳ ಸಮನ್ವಯವಿರಬೇಕು ಹಾಗೂ ಪದೇ ಪದೇ ಪ್ರವಾಹಕ್ಕೆ ಒಳಗಾಗುವ ಗ್ರಾ.ಪಂಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು, ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ 5 ಸಾವಿರ ಪರಿಹಾರ ನೀಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಹಾಗಾಗಿದ್ದರೆ ಸರಿಪಡಿಸಲಾಗುವುದು. ಮೊದಲು ಸ್ಪಷ್ಟತೆ ಇರಲಿಲ್ಲ. ಈಗಾಗಲೇ ಈ ಬಗ್ಗೆ ಆದೇಶ ನೀಡಲಾಗಿದೆ. ಹೊಸ ಆದೇಶದಂತೆ ಪರಿಹಾರದ ನೀಡಲು ಆದೇಶಿಸಿದೆ ಎಂದರು.

ಹಾಲಿನ ಉತ್ಪನ್ನಗಳ ಬೆಲೆ ಏರಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button