ಪ್ರಗತಿವಾಹಿನಿ ಸುದ್ದಿ: ಸಾಲ ತೀರಿಸಲು ಆಗದೆ ಚಿಕ್ಕಮ್ಮಳ ಮನೆಗೆ ಬಂದಿದ್ದ 11 ವರ್ಷದ ಅಕ್ಕನ ಮಗಳನ್ನು ಮಾರಾಟ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ದಿಟ್ಟೂರಿನಲ್ಲಿ ವಾಸವಾಗಿರುವ ದಂಪತಿಯ ಮಗಳನ್ನು ಹಿಂದೂಪುರದಲ್ಲಿರುವ ತಂಗಿಯು ತನಗೆ ಹೆರಿಗೆಯಾಗಿದೆ, ಸ್ವಲ್ಪ ದಿನಗಳ ಕಾಲ ಮಗುವನ್ನು ತನ್ನ ಬಳಿ ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದಳು. ಬಾಲಕಿಯ ತಾಯಿಯು ತನ್ನ ಸಹೋದರಿಯ ಮಾತಿಗೆ ಒಪ್ಪಿ ಮಗಳನ್ನು ಕಳಿಸಿದ್ದಳು.
ಬಾಣಂತನ ಮುಗಿಸಿ ವಾಪಸ್ ಮಗಳು ಬರಲಿಲ್ಲ. ಹೀಗಾಗಿ ಬಾಲಕಿಯ ತಾಯಿ ಅಲ್ಲಿಗೆ ಹೋದಾಗ ಮಗಳು ಇಲ್ಲದನ್ನ ಕಂಡು ಗಾಬರಿಯಾಗಿದ್ದಾಳೆ. ಈ ವೇಳೆ ತಂಗಿ ‘ನಾನು ಸಾಲ ಮಾಡಿಕೊಂಡಿದ್ದೆ ಸಾಲ ತೀರಿಸಲಾಗದೇ 35 ಸಾವಿರಕ್ಕೆ ಮಗಳನ್ನ ಜೀತಕ್ಕಾಗಿ ಮಾರಾಟ ಮಾಡಿರುವುದಾಗಿ ಹೇಳಿದ್ದಾಳೆ.
ಹಿಂದೂಪುರದ ವ್ಯಕ್ತಿಯೊಬ್ಬ ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದನಂತೆ. ಈ ವಿಚಾರ ತಿಳಿದ ಬಾಲಕಿಯ ತಾಯಿ, ಮಗಳನ್ನ ತನ್ನೊಂದಿಗೆ ಕಳಿಸುವಂತೆ ಬೇಡಿಕೊಂಡರೂ ಕೂಡ ಆತ ಒಪ್ಪಿರಲಿಲ್ಲ. ಹಣ ನೀಡಿ ಬಾಲಕಿಯನ್ನ ಕರೆದುಕೊಂಡು ಹೋಗು ಎಂದು ಹೇಳಿದ್ದನಂತೆ.
ಇನ್ನು ತಾಯಿ ವಾಪಸ್ ತುಮಕೂರಿಗೆ ಬಂದು ಮಗಳ ಸ್ಥಿತಿ ಬಗ್ಗೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ಜಿಲ್ಲಾ ಎಸ್‌ಪಿ ಅಶೋಕ್‌ರವರಿಗೆ ಮಾಹಿತಿ ನೀಡಿ ಬಾಲಕಿಯನ್ನ ರಕ್ಷಿಸಿ ಕರೆತಂದಿದ್ದಾರೆ.
ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಸಾಲಕ್ಕೆ ಹೆದರಿ ತನ್ನ ಅಕ್ಕನ ಮಗಳನ್ನೆ ಮಾರಾಟ ಮಾಡಿದ್ದ ಚಿಕ್ಕಮ್ಮ ಇತ್ತ ಸ್ವಪ್ರಜ್ಞೆಯಿಂದ ತನ್ನ ಮಗಳನ್ನ ರಕ್ಷಣೆ ಮಾಡುವಲ್ಲಿ ತಾಯಿ ಯಶಸ್ವಿ ಆಗಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ