ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರಾಜ್ಯ ಬಿಜೆಪಿ ಸರಕಾರ ಬೆಳಗಾವಿ ವಿಷಯದಲ್ಲಿ ಮಲತಾಯಿ ಧೋರಣೆ ತಳೆದಿದೆ ಎಂದು ಆರೋಪಿಸಿ ಆಮ್ ಆದ್ಮಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಬೆಳಗಾವಿ ಜಿಲ್ಲೆಯ ಜನರು ಅವರ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದರು. ಎಲ್ಲ ಹಂತದಲ್ಲಿಯೂ ಸಕಲ ಸೌಕರ್ಯ ಹೊಂದಿರುವ ಬೆಳಗಾವಿ ಜಿಲ್ಲೆಗೆ ಕಡೆಗಣಿಸಿ ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಂಗಳೂರು ಹಾಗೂ ಮಂಗಳೂರಿನ ಹೊರ ಭಾಗದಲ್ಲಿ ಹೈಟೆಕ್ ಸಿಟಿ ನಿರ್ಮಾಣ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ದೂರಿದರು.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ತಂತ್ರಜ್ಞಾನ ಶೃಂಗದ ರಜತೋತ್ಸವದಲ್ಲಿ ಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ ಉತ್ತೇಜಿಸಲು ಬೆಳಗಾವಿ ಜಿಲ್ಲೆಯನ್ನು ಕಡೆಗಣಿಸಿ ರಾಜ್ಯದ ಆರು ಜಿಲ್ಲೆಗಳಲ್ಲಿ ಹೈ ಟೆಕ್ ಸಿಟಿ ನಿರ್ಮಾಣ ಘೋಷಣೆ ಮಾಡಿರುವುದು ಜಿಲ್ಲೆಯ ಜನರಿಗೆ ಬೇಸರ ತರಿಸಿದೆ.
ಕೇವಲ ಹೈ ಟೆಕ್ ಸಿಟಿ ಕುರಿತು ಮಾತ್ರವಲ್ಲ ಸ್ಟಾರ್ಟ್ ಅಪ್ ಕ್ಲಸ್ಟರ್ ನಲ್ಲಿಯೂ ಬೆಳಗಾವಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿ ಕ್ಲಷ್ಟರ್ ನಿರ್ಮಾಣ ಮಾಡಿದರು. ಅದರ ಎಲ್ಲಾ ಕಾರ್ಯಕ್ರಮ, ಯೋಜನೆಗಳು ಕೇವಲ ಹುಬ್ಬಳ್ಳಿ-ಧಾರವಾಡದ ಪಾಲಾಗುತ್ತಿವೆ ವಿನಃ ಬೆಳಗಾವಿಗೆ ಬರುತ್ತಿಲ್ಲ. ಆರ್ಟಿಫಿಷಯಲ್ ಇಂಟಲಿಜೆನ್ಸ್ ಎಕ್ಸಿಲೆನ್ಸ್ ಸೆಂಟರ್ ಬೆಳಗಾವಿ ಜಿಲ್ಲೆಗೆ ಘೋಷಣೆ ಮಾಡಿ ಹುಬ್ಬಳ್ಳಿ-ಧಾರವಾಡದಲ್ಲಿ ಮಾಡುತ್ತಿದ್ದಾರೆ. ಒಂದೇ ಭಾರತ ರೈಲ್ವು ಕೇವಲ ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ಮಾತ್ರ ಪ್ರಾರಂಭಮಾಡಿದ್ದಾರೆ. ಅದು ಬೆಳಗಾವಿಯವರೆಗೂ ಮಾಡಿದ್ದರೆ ಇಲ್ಲಿನ ಜನರಿಗೆ ಅನುಕೂಲವಾಗುತ್ತಿತ್ತು. 100 ಎಕರೆಯಲ್ಲಿ ಸ್ಟಾರ್ಟ್ ಅಪ್ ಲಾಂಚ್ ಪ್ಯಾಡ್ ಹುಬ್ಬಳ್ಳಿ ಧಾರವಾಡಕ್ಕೆ ಕೊಟ್ಟು ಬೆಳಗಾವಿಗೆ ಕೊಡಲಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರ ತೆರಿಗೆ ವಿಷಯ ಬಂದಾಗ ಎರಡನೇ ಸ್ಥಾನ ಬೆಳಗಾವಿ ಜಿಲ್ಲೆಯಿಂದ ಪಾವತಿಸುತ್ತೇವೆ. ವೈದ್ಯಕೀಯ ಸೌಲಭ್ಯ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನಮ್ಮ ಜಿಲ್ಲೆಯಲ್ಲಿ ಸುಮಾರು 53 ಲಕ್ಷ ಜನಸಂಖ್ಯೆ ಇದೆ. ಕಡಿಮೆ ಹಾಸಿಗೆಯ ಸೌಲಭ್ಯ ಇದೆ. ಇಲ್ಲಿ ಬರುವ ಸಾಕಷ್ಟು ಯೋಜನೆಗಳು ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಪಾಲಾಗುತ್ತಿವೆ. ಕಳೆದ ವಾರ ಸಚಿವ ಸಂಪುಟ ಸಭೆಯಲ್ಲಿ ಸ್ಪೇಷಲ್ ಇನ್ಸಟಮೆಂಟ್ ಝೋನ ಹುಬ್ಬಳ್ಳಿ-ಧಾರವಾಡ, ತುಮಕೂರಗೆ ನೀಡಿ ಬೆಳಗಾವಿ ಜಿಲ್ಲೆಗೆ ನೀಡಲಿಲ್ಲ. ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಬೆಳಗಾವಿ ಜಿಲ್ಲೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಹೂಡಿಕೆ ವಲಯದಲ್ಲಿಯೂ ಬೆಳಗಾವಿಗೆ ಅನ್ಯಾಯ ಮಾಡಿ ಹುಬ್ಬಳ್ಳಿ-ಧಾರವಡಕ್ಕೆ ಮಾಡಿದೆ. ಹೈಟೆಕ್ ಸಿಟಿಯೂ ಬೆಳಗಾವಿಯನ್ನು ಕಡೆಗಣಿಸಿ ಹುಬ್ಬಳ್ಳಿ-ಧಾರವಾಡಕ್ಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ಜನರ ಜೊತೆಗೆ ಅವಿನಾಭಾವ ಸಂಬಂಧ ಇದೆ. ಬೆಳಗಾವಿಯ ಸಮಗ್ರ ಮಾಹಿತಿ ತಿಳಿದಿದ್ದಾರೆ. ಮುಖ್ಯಮಂತ್ರಿಯಾದ ಮೇಲೆ ಜಿಲ್ಲೆಯ ಜನರು ಸಾಕಷ್ಟು ಭರವಸೆ ಇಟ್ಟಿದ್ದರು. ಅದು ಹುಸಿಯಾಗಿದೆ. ಕೂಡಲೇ ಬೆಳಗಾವಿಗೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಶಂಕರ ಹೆಗಡೆ, ಅಸ್ತಂ ತಹಶಿಲ್ದಾರ, ಸುದರ್ಶನ ಶಿಂಧೆ, ಶಬ್ಬೀರ್ ಮುಲ್ಲಾ, ರವೀಂದ್ರ ಬೆಲ್ಲದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ