– ಸಭಾಧ್ಯಕ್ಷರು ಮತ್ತು ಸಭಾಪತಿಗೆ ಸರ್ಕಾರದ ಪರ ಮನವಿ ಸಲ್ಲಿಕೆ
– ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ
ಪ್ರಗತಿವಾಹಿನಿ ಸುದ್ದಿ;
ಅಮಾನತ್ತುಗೊಂಡ ಸಂಸತ್ ಸದಸ್ಯರ ಅಮಾನತ್ತು ಹಿಂಪಡೆಯಲು ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಸರ್ಕಾರದ ಪರವಾಗಿ ಮನವಿ ಮಾಡಿದ್ದೇವೆ ಎಂದು ಸಂಸದೀಯ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಸಂಬಂಧಪಟ್ಟ ವಿಶೇಷಾಧಿಕಾರ ಸಮಿತಿಯೊಂದಿಗೆ ಚರ್ಚಿಸಿ ಅಮಾನತುಗೊಂಡಿರುವ ಎಲ್ಲ ಸದಸ್ಯರ ಅಮಾನತು ಹಿಂಪಡೆಯುವಂತೆ ಸರ್ಕಾರದ ಪರವಾಗಿ ಕೋರಲಾಗಿದೆ ಎಂದು ಹೇಳಿದರು.
I.N.D.I.A ಮೈತ್ರಿ ಬ್ರೈನ್ ಡೆಡ್
INDIA ಮೈತ್ರಿ ಬ್ರೈನ್ ಡೆಡ್ ಸ್ಥಿತಿಯಲ್ಲಿದೆ. ಕಾಂಗ್ರೆಸ್ ನ ಜಗಳದಿಂದಲೇ ಅದರ ಮಿತ್ರ ಪಕ್ಷಗಳೊಂದಿಗಿನ ಮೈತ್ರಿ ಅಂತ್ಯ ಕಂಡಿದೆ ಎಂದು ಸಚಿವ ಜೋಶಿ ಲೇವಡಿ ಮಾಡಿದರು.
ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ನಡುವಿನ ಮೈತ್ರಿ ಹೋರಾಟ ಅಂತ್ಯ ಕಂಡಿದೆ. ಈಗಾಗಲೇ ಸಂಪೂರ್ಣ ಮುರಿದು ಬಿದ್ದಿದೆ ಎಂದು ಹೇಳಿದರು.
ಇದು ಅಸ್ವಾಭಾವಿಕ ಮೈತ್ರಿ. ಫೋಟೋ ಶೂಟ್ ಗೆ ಸೀಮಿತ ಎಂದು ಹಿಂದೆಯೇ ಹೇಳಿದ್ದೇವೆ. ಇದೀಗ ಅದರ ಬ್ರೈನ್ ಡೆಡ್ ಆಗಿದೆ. INDIA ಮೈತ್ರಿ ಬೇಗ ಸಾಯುವುದು ಖಚಿತ ಎಂದು ಜೋಶಿ ಹೇಳಿದರು.
ಮೈತ್ರಿ ಪಕ್ಷಗಳೊಂದಿಗೆ ಹೊಡೆದಾಡಿಕೊಂಡು ಒಡೆಯುವುದು ಕಾಂಗ್ರೆಸ್‌ನ ಸ್ವಭಾವ. ಹಾಗಾಗಿಯೇ ಅದು ಕೊನೆಗಂಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಲ್ಲೇ ಇನ್ನು ಕಾದಾಟ: INDIA ಮೈತ್ರಿ ಮುರಿದು ಬಿದ್ದು ಒಂದೊಂದೇ ಪಕ್ಷಗಳು ದೂರಾಗಿದ್ದರಿಂದ ಈಗ ಕಾಂಗ್ರೆಸ್ ನವರು ತಮ್ಮೊಳಗೆ ತಾವೇ ಕಾದಾಡುವಂತೆ ಆಗಿದೆ ಎಂದು ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ