ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವರ್ಷದಿಂದ ವರ್ಷಕ್ಕೆ ಬೇಸಿಗೆ ಅಬ್ಬರ ಹೆಚ್ಚುತ್ತಲೇ ಸಾಗಿದೆ. ಹನಿ ಜಲಕ್ಕಾಗಿ ಪರದಾಡುವ ಪರಿಸ್ಥಿತಿಗೆ ಕೊನೆ ಹಾಡಲು ನಾನಾ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಇಂಥ ಸನ್ನಿವೇಶದಲ್ಲಿ ಶೂನ್ಯ ಫೌಂಡೇಶನ್ ಸಂಸ್ಥಾಪಕ, ಜಲಸಂರಕ್ಷಣಾಧಿಕಾರಿ ಕಿರಣ್ ನಿಪ್ಪಾಣಿಕರ ಅವರ ‘ಆಕಾಶ ಗಂಗಾ’ ಯೋಜನೆ ಜೀವಜಲದ ಸೆಲೆಯನ್ನೇ ಕಳೆದುಕೊಂಡು ಪಾಳು ಬಿದ್ದಿದ್ದ ಎರಡು ಐತಿಹಾಸಿಕ ಬಾವಿಗಳಿಗೆ ಮರುಜೀವ ತುಂಬುತ್ತಿದೆ.
ಈ ಯೋಜನೆಯಡಿ ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ ಕೊಂಡಪ್ಪ ಸ್ಟ್ರೀಟ್ ನ ಮಾರುಕಟ್ಟೆ ಬೀದಿಯ ತೆರೆದ ಜಾಗದಲ್ಲಿ ನಿರುಪಯುಕ್ತವಾಗಿದ್ದ ಹಳೆಯ ಬಾವಿಯ ಪುನರುಜ್ಜೀವನ ಮತ್ತು ಸ್ವಾತಂತ್ರ್ಯ ರಸ್ತೆಯಲ್ಲಿ ಹೊಸ ಬಾವಿಯ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.
ಎರಡೂ ಬಾವಿಗಳ ಅಂತರ್ಜಲ ಕುಸಿತವನ್ನು ತಡೆಗಟ್ಟಲು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಈ ಯೋಜನೆಯಡಿ ಅಳವಡಿಸಲಾಗುತ್ತಿದೆ. ಈ ಮೂಲಕ ಭವಿಷ್ಯದ ಪೀಳಿಗೆಗೆ ಈ ಅಮೂಲ್ಯ ಅಂತರ್ಜಲ ಸಂಪನ್ಮೂಲವನ್ನು ಸಂರಕ್ಷಿಸಿ ನೀರಿಗಾಗಿ ನಡೆಯುತ್ತಿರುವ ಹೋರಾಟ ಕ್ಕೆ ಇತಿಶ್ರೀ ಹಾಡಲಾಗುತ್ತಿದೆ.
ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ನಿರ್ಮಿಸಲಾದ ಐತಿಹಾಸಿಕ ಬಾವಿ ತಲೆಮಾರುಗಳಿಂದ ಸಮುದಾಯಕ್ಕೆ ನೀರಿನ ಪ್ರಮುಖ ಮೂಲವಾಗಿದೆ. ಆದರೆ, ಕಾಲಕ್ರಮೇಣ ಅದು ಪಾಳು ಬಿದ್ದಿತ್ತು. ಶೂನ್ಯ ಫೌಂಡೇಶನ್ ತಜ್ಞರ ತಂಡ ಬಾವಿಯನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸಲು ಪಣ ತೊಟ್ಟಿದ್ದು, ಇದು ಮುಂಬರುವ ವರ್ಷಗಳಲ್ಲಿ ಶುದ್ಧ ಮತ್ತು ಸುರಕ್ಷಿತ ನೀರನ್ನು ಒದಗಿಸಲು ಸಂಕಲ್ಪಿಸಿದೆ. ಬಾವಿಗೆ ಮರುಜೀವ ತುಂಬುವುದಷ್ಟೇ ಅಲ್ಲದೆ ಕಲಾತ್ಮಕತೆಗೂ ಆದ್ಯತೆ ನೀಡಲಾಗಿದೆ.
ಸ್ಥಳೀಯ ನಿವಾಸಿಗಳೊಂದಿಗೆ ಸಮನ್ವಯ ಸಾಧಿಸಿ ಅವರ ಅಗತ್ಯತೆಗೆ ತಕ್ಕಂತೆ ಇದನ್ನು ರೂಪಿಸಲಾಗುತ್ತಿರುವುದು ವಿಶೇಷವೆನಿಸಿದೆ.
‘ಆಕಾಶ ಗಂಗಾ ಯೋಜನೆಯಡಿ ಕಂಟೋನ್ಮೆಂಟ್ ಪ್ರದೇಶದಲ್ಲಿ 5 ಹೊಸ ಬಾವಿಗಳ ನಿರ್ಮಾಣ, 22 ಅಸ್ತಿತ್ವದಲ್ಲಿರುವ ಬಾವಿಗಳ ಸ್ವಚ್ಛತೆ, ಮಳೆನೀರು ಕೊಯ್ಲು, ಎರಡು ನಿರುಪಯುಕ್ತ ಬಾವಿಗಳ ಪುನಶ್ಚೇತನಕ್ಕೆ ಮತ್ತು ಮಳೆನೀರು ಕೊಯ್ಲು, ಪುನರ್ ಭರ್ತಿಗಾಗಿ ಸುಮಾರು ನಾಲ್ಕರಿಂದ ಐದು ಬೋರ್‌ವೆಲ್‌ಗಳನ್ನು ಕೊರೆಯುವ ಕಾಮಗಾರಿ ತೆಗೆದುಕೊಳ್ಳಲು ಯೋಜಿಸಲಾಗಿದೆ. ಯೋಜನೆಯ ಯಶಸ್ಸು ಮತ್ತು ಸಮುದಾಯಕ್ಕೆ ಗರಿಷ್ಠ ಪ್ರಮಾಣದಲ್ಲಿ ನೆರವಾಗಲು ವಿವಿಧ ಸಂಸ್ಥೆಗಳು ಸಹಾಯ, ಸಹಕಾರ ನೀಡಲು ಮುಂದಾಗಿವೆ.
ಆಕಾಶ ಗಂಗಾ ಯೋಜನೆಯನ್ನು ಕೈಗೆತ್ತಿಕೊಳ್ಳಲು ತಮಗೆ ಅನುಮತಿ ನೀಡಿದ ಕಂಟೋನ್ಮೆಂಟ್ ಮಂಡಳಿಯ ಸಿಇಒ ಆನಂದ್ ಕೆ ಅವರಿಗೆ ನಾನು ಕೃತಜ್ಞರಾಗಿರುವುದಾಗಿ ಹೇಳಿರುವ ಕಿರಣ್ ನಿಪ್ಪಾಣಿಕರ್ ಈ ಉಪಕ್ರಮದಿಂದ ಕಂಟೋನ್ಮೆಂಟ್ ಪ್ರದೇಶದಲ್ಲಿ ವಾಸಿಸುವ ಅನೇಕ ನಾಗರಿಕರಿಗೆ ಅನುಕೂಲವಾಗಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ಬಾವಿಯ ಪುನರುಜ್ಜೀವನವನ್ನು ಶೂನ್ಯ ಫೌಂಡೇಶನ್ ನ ಸಿಎಸ್‌ಆರ್‌ನ ಭಾಗವಾಗಿ ಬಿಕಾನೆರ್ ರೆಸ್ಟೋರೆಂಟ್ ಮತ್ತು ಮಿಠಾಯಿವಾಲಾ ಪ್ರಾಯೋಜಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ