
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಭೂತರಾಮನಹಟ್ಟಿಯಲ್ಲಿ “ಅಕ್ಕ ಕೆಫೆ” ತೆರೆಯುವ ಕುರಿತು ಜಿಪಂ ಸಿಇಒ ರಾಹುಲ್ ಶಿಂಧೆ ರವರ ಅಧ್ಯಕ್ಷತೆ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವಿಭಾಗ ಕ್ರಾಂತಿ ಎನ್.ಇ ರವರ ಉಪಸ್ಥಿತಿಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಕೆ.ಆರ್.ಐ.ಡಿ.ಎಲ್ ಇಲಾಖೆವತಿಯಿಂದ ಅಕ್ಕ ಕೆಫೆಯ ಕಟ್ಟಡ ವಿನ್ಯಾಸ ಹಾಗೂ ಅಂದಾಜು ವೆಚ್ಚದ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಜಿಪಂ ಸಿಇಒ ರಾಹುಲ್ ಶಿಂಧೆ ಕಟ್ಟಡ ವಿನ್ಯಾಸದ ಚಿತ್ರಣವನ್ನು ಪರಿಶೀಲಿಸಿ, ಕಟ್ಟಡ ವಿನ್ಯಾಸವೂ ಪ್ರವಾಸಿಗರಿಗೆ ಆಕರ್ಷಿಸುವಂತೆ ಹಾಗೂ ಅರಣ್ಯದ ಪ್ರಕೃತಿಯನ್ನು ಬಿಂಬಿಸುವಂತೆ ಕಟ್ಟಡ ವಿನ್ಯಾಸದ ಕಾರ್ಯವಾಗಬೇಕೆಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ತದ ನಂತರ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಸದಸ್ಯರ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಬೆಳಗಾವಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವರಿಗೆ ಮಾನ್ಯರು ಸೂಚಿಸಿ ಈ ಕುರಿತು ಮೇಲ್ವಿಚಾರಣೆ ಕೈಗೊಳ್ಳಲು ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನ್ನವರ ರವರಿಗೆ ತಿಳಿಸಿದರು.
ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಸದಸ್ಯರ ಜೊತೆ ಮಾನ್ಯರು ಮಾತನಾಡಿ ಅಕ್ಕ ಕೆಫೆಯನ್ನು ಸುಗುಮವಾಗಿ ನಿರ್ವಹಿಸಲು ಅವಶ್ಯವಿರುವ ಸ್ವ-ಸಹಾಯ ಗುಂಪಿನ ಅರ್ಹ ಸದಸ್ಯರನ್ನು ಆಯ್ಕೆ ಮಾಡಿ ಹಾಗೂ ಅದರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ತಿಳಿಸಿದರು.
ಮುಂದುವರೆದು, ಅಕ್ಕ ಕೆಫೆ ನಿರ್ವಹಣೆ ಮಾಡುವ ಸದಸ್ಯರಿಗೆ ತರಬೇತಿ ನೀಡುವ ಕುರಿತಂತೆ ಮಾನ್ಯರು ಮಾತನಾಡಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದಿಂದ ಆಯ್ಕೆಯಾದ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ವೃತ್ತಿಪರ ಹೋಟೆಲ್ ನಿರ್ವಹಣೆ ಮಾಡುವುದರ ಕುರಿತು ಸೂಕ್ತ ರೀತಿಯಲ್ಲಿ ತರಬೇತಿ ಆಯೋಜನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.