Kannada NewsKarnataka NewsLatest

ಸಂತ್ರಸ್ತರ ಮೊಗದಲ್ಲಿ ಮಂದಹಾಸ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ

ಸಂತ್ರಸ್ತರ ಮೊಗದಲ್ಲಿ ಮಂದಹಾಸ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ

ಜಿಲ್ಲಾಧಿಕಾರಿಗಳು ಇಂದು ಜಿಲ್ಲಾಧಿಕಾರಿ ಗೃಹಕಚೇರಿ ಆವರಣ, ಸುವರ್ಣ ವಿಧಾನಸೌಧ, ನಗರಾಭಿವೃದ್ಧಿಪ್ರಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಕ್ರೀಡಾಂಗಣ ಸೇರಿ ಒಟ್ಟೂ 5 ಕಡೆ ಧ್ವಜಾರೋಹಣ ನೆರವೇರಿಸಿದರು.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಸ್ವಾತಂತ್ಯ್ರೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅವರ ಭಾಷಣದ ಪೂರ್ಣಪಾಠ ಇಲ್ಲಿದೆ –

ಆಧುನಿಕ ಪ್ರಪಂಚ ಕಂಡ ಅತ್ಯಂತ ಪ್ರಭಾವಶಾಲಿ ಆಯುಧ ‘ಅಹಿಂಸೆ’. ಅಹಿಂಸಾ ಅಸ್ತ್ರದಿಂದ ಸ್ವಾತಂತ್ರ್ಯವನ್ನು ಗೆದ್ದುಕೊಂಡ ವೀರಪರಂಪರೆ ನಮ್ಮದು.
“ವೈವಿಧ್ಯತೆಯಲ್ಲಿ ಏಕತೆ” ಸಾಧಿಸಿದ ಕೆಲವೇ ದೇಶಗಳಲ್ಲಿ ಭಾರತ ಅಗ್ರಮಾನ್ಯ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಗಾಂಧಿ, ಜವಾಹರ್ ಲಾಲ್ ನೆಹರು, ವಲ್ಲಭಬಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ್, ನೇತಾಜಿ ಸುಭಾಷ್‍ಚಂದ್ರ ಬೋಸ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಡಾ:ಬಿ.ಆರ್.ಅಂಬೇಡ್ಕರ್ ಸೇರಿದಂತೆ ಎಲ್ಲ ಮಹನೀಯರ ಪಾದಕಮಲಗಳಿಗೆ ನಮಸ್ಕಾರಗಳು.
– ಕಳೆದ ಏಳು ದಶಕಗಳಲ್ಲಿ ಇಡೀ ಜಗತ್ತಿಗೆ ಮಾದರಿಯಾಗುವಂತೆ ಪ್ರಗತಿ ಸಾಧಿಸಿರುವ ಭಾರತವು ಇಂದು ಜಗತ್ತಿನ ಅತ್ಯಂತ ಪ್ರಭಾವೀ-ಬಲಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವಿಜ್ಞಾನ-ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಬಾಹ್ಯಾಕಾಶ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಭಾರತದ ಸಾಧನೆ ಪ್ರಶಂಸನೀಯವಾದದ್ದು. ಭಾರತದ ಈ ಸಾಧನೆಯಲ್ಲಿ ಕರ್ನಾಟಕದ ಪಾತ್ರ ಮಹತ್ವವಾದದ್ದು.
ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದ ಪಾತ್ರ ಅದ್ವಿತೀಯ. ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಂದ ಆರಂಭಗೊಂಡ ಕರ್ನಾಟಕದಲ್ಲಿನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಹುದೊಡ್ಡ ಪರಂಪರೆ ಇದೆ.

ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದ ಚನ್ನಮ್ಮ

ಸಂಗ್ರಾಮದ ದಿನಗಳಲ್ಲಿ ಸೆರೆಮನೆ ಸೇರಿದ ಸಾವಿರಾರು ಸಂಖ್ಯೆಯ ಸತ್ಯಾಗ್ರಹಿ-ಹೋರಾಟಗಾರರಲ್ಲಿ ಉತ್ತರ ಕರ್ನಾಟಕದವರ ಸಂಖ್ಯೆ ಗಣನೀಯ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದದ್ದು ಕರ್ನಾಟಕದ ಸ್ವಾತಂತ್ರ ಸಂಗ್ರಾಮಕ್ಕೆ ಹಿಡಿದ ಕೈಗನ್ನಡಿ.
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬೆಳಗಾವಿ ಜಿಲ್ಲೆ ಕೂಡ ಮುಂಚೂಣಿಯಲ್ಲಿತ್ತು. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದಳು.
ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರಂದು ವೀರಮರಣವನ್ನಪ್ಪಿದ್ದು ಜನವರಿ 26.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ಮಹನೀಯರು ಶ್ರೀ ಗಂಗಾಧರ ದೇಶಪಾಂಡೆ. ‘ಕರ್ನಾಟಕದ ಸಿಂಹ’ ಹಾಗೂ ‘ಕರ್ನಾಟಕದ ಖಾದಿ ಭಗೀರಥ’ ಎಂದು ಗುರುತಿಸಿಕೊಂಡಿದ್ದ ದೇಶಪಾಂಡೆಯವರ ಕೊಡುಗೆ ಅಪಾರ. ಇವರ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕರು ನಮಗೆಲ್ಲ ಸ್ಫೂರ್ತಿಯಾಗಿದ್ದಾರೆ.

ಸಮರೋಪಾದಿಯಲ್ಲಿ ಕಾರ್ಯ

ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ
ದೇಶಪ್ರೇಮ ಅನುರಣಿಸಬೇಕಾದ ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ರಾಜ್ಯವೇ ಎಂದೂ ಕಂಡರಿಯದ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದು, ಲಕ್ಷಾಂತರ ಕುಟುಂಬಗಳು ಪುನರ್ವಸತಿಯ ನಿರೀಕ್ಷೆಯಲ್ಲಿವೆ.
ಜನರು ಜೀವರಕ್ಷಣೆಗಾಗಿ ಉಟ್ಟ ಬಟ್ಟೆಯಲ್ಲಿಯೇ ಮನೆಗಳನ್ನು ಬಿಟ್ಟು ಬಂದಿರುವ ಇಂತಹ ಸಂದಿಗ್ಧ ಸ್ಥಿತಿಯಲ್ಲಿ  ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರವು ಸಂತ್ರಸ್ತರ ನೆರವಿಗೆ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳನ್ನು ಕೈಗೊಂಡಿದೆ.
ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ, ಆಶ್ರಯ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ತಕ್ಷಣವೇ ಆರಂಭಿಸುವ ಮೂಲಕ ಭಾರೀ ಪ್ರಮಾಣದ ಸಾವು-ನೋವು ಹಾಗೂ ಆಸ್ತಿಪಾಸ್ತಿಗಳ ನಷ್ಟವನ್ನು ತಡೆಗಟ್ಟಲಾಗಿದೆ.
ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಜಿಲ್ಲೆಯ ಪ್ರವಾಹಬಾಧಿತ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗೆ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಜಿಲ್ಲಾಡಳಿತಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಬೆಳಗಾವಿಯೂ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಮಹಾಮಳೆ, ಪ್ರವಾಹ, ಭೂಕುಸಿತದಿಂದಾಗಿ ಸಂಪೂರ್ಣವಾಗಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಐದು ಲಕ್ಷ ರೂಪಾಯಿ ಹಾಗೂ ಮನೆಗಳ ದುರಸ್ತಿಗೆ 1 ಲಕ್ಷ ರೂಪಾಯಿವರೆಗೆ ನೆರವು ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ಪ್ರಕಟಿಸಿದ್ದು, ಬೆಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ನಿಲ್ಲಲಿದೆ ಎಂಬ ಭರವಸೆಯನ್ನೂ ಈಗಾಗಲೇ ನೀಡಿದ್ದಾರೆ.
ಇದಲ್ಲದೇ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಹತ್ತು ಸಾವಿರ ರೂಪಾಯಿ ಪರಿಹಾರವನ್ನೂ ಘೋಷಿಸಿದ್ದು, ಪರಿಹಾರ ವಿತರಣೆ ಕೆಲಸ ಚುರುಕಿನಿಂದ ನಡೆದಿದೆ.

 

ಅಪಾರ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸಪ್ತ ನದಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ದೂಧಗಂಗಾ ಮತ್ತು ವೇದಗಂಗಾ ನದಿಗಳ ಮಹಾಪೂರದಿಂದಾಗಿ ಲಕ್ಷಾಂತರ ಕುಟುಂಬಗಳು ಮನೆಮಠಗಳನ್ನು ತೊರೆಯಬೇಕಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಡಳಿತ ಅತ್ಯಂತ ತ್ವರಿತ ಗತಿಯಲ್ಲಿ ಸಂತ್ರಸ್ತರ ನೆರವಿಗೆ ದೌಡಾಯಿಸಿತು. ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಯ ಹದಿನಾಲ್ಕು ತಾಲ್ಲೂಕುಗಳ 374 ಗ್ರಾಮಗಳ 4.14 ಲಕ್ಷ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಯಿತು.
ಪ್ರವಾಹಕ್ಕೆ ಸಿಲುಕಿದ್ದ ಜಾನುವಾರುಗಳನ್ನು ಸ್ಥಳಾಂತರಿಸಿ, ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಇಷ್ಟೆಲ್ಲ ಪ್ರಯತ್ನದ ನಡುವೆಯೂ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಹಾಗೂ ಮನೆ ಕುಸಿದು ಒಟ್ಟು 13 ಜನರು ಹಾಗೂ 274 ಜಾನುವಾರುಗಳು ಪ್ರಾಣವನ್ನು ಕಳೆದುಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಸಂತ್ರಸ್ತರಿಗಾಗಿ ಪ್ರವಾಹ ಬಾಧಿತ ಬೆಳಗಾವಿ ನಗರವೂ ಸೇರಿದಂತೆ ಒಟ್ಟು 493 ಪರಿಹಾರ ಕೇಂದ್ರಗಳನ್ನು ಆರಂಭಿಸುವ ಮೂಲಕ 1,84,966 ಜನರಿಗೆ ಊಟೋಪಹಾರ, ಹಾಸಿಗೆ-ಹೊದಿಕೆಗಳು, ಶುದ್ಧ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಪ್ರತಿಯೊಂದನ್ನು ವ್ಯವಸ್ಥೆ ಮಾಡಲಾಗಿರುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೂ ಪರಿಹಾರ ಕೇಂದ್ರದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟು ಉಚಿತ ಮೇವು ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಯಿತು.
ಪ್ರಾಥಮಿಕ ಸಮೀಕ್ಷೆಯ ಪ್ರಕಾರ ಪ್ರವಾಹದಿಂದಾಗಿ 10202 ಮನೆಗಳು ಭಾಗಶಃ ಕುಸಿದಿದ್ದು, 6801 ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿರುತ್ತವೆ. ಜಿಲ್ಲೆಯಲ್ಲಿ 2665 ಕಿ.ಮೀ ರಸ್ತೆ, 512 ಸೇತುವೆಗಳು, 3255 ಸರ್ಕಾರಿ ಕಟ್ಟಡಗಳು, 286 ನೀರು ಸರಬರಾಜು ಪೈಪ್‍ಲೈನ್ ಹಾಗೂ 5204 ವಿದ್ಯುತ್ ಕಂಬಗಳು ಕೂಡ ಹಾನಿಗೊಳಗಾಗಿರುತ್ತವೆ.

 

ಶ್ರಮಿಸಿದವರಿಗೆ ಕೃತಜ್ಞತೆ

ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಮನೆ ಕುಸಿದು ಮೃತಪಟ್ಟಿರುವವರ ಕುಟುಂಬದವರಿಗೆ ತಲಾ ಐದು ಲಕ್ಷ ರೂಪಾಯಿಯಂತೆ ಪರಿಹಾರ ನೀಡಲಾಗುತ್ತಿದೆ. ಅದೇ ರೀತಿ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವವರಿಗೆ ಸದ್ಯಕ್ಕೆ ನಿಯಮಾವಳಿ ಪ್ರಕಾರ ಪ್ರತಿ ಮನೆಗೆ 95,100 ರೂಪಾಯಿ ಪರಿಹಾರ ನೀಡಲಾಗುತ್ತಿದೆ.
ಇದಲ್ಲದೇ ಭಾಗಶಃ ಮನೆ ಕುಸಿತ ಪ್ರಕರಣಗಳಲ್ಲಿ ಮತ್ತು ಜಾನುವಾರುಗಳ ಜೀವಹಾನಿಯಾಗಿರುವುದರಿಂದ ಅವುಗಳ ಮಾಲೀಕರಿಗೂ ನಿಯಮಾವಳಿ ಪ್ರಕಾರ ಪರಿಹಾರವನ್ನು ಒದಗಿಸುವ ಕೆಲಸ ಚುರುಕಿನಿಂದ ನಡೆದಿದೆ.
ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಪ್ರತಿಯೊಂದು ಕುಟುಂಬಕ್ಕೆ ಪಾತ್ರೆಗಳನ್ನು ಖರೀದಿಸಲು 1800 ರೂಪಾಯಿ ಹಾಗೂ ಬಟ್ಟೆಗಳನ್ನು ಖರೀದಿಸಲು 2000 ಸೇರಿದಂತೆ ಒಟ್ಟಾರೆ 3800 ರೂಪಾಯಿ ಪರಿಹಾರವನ್ನು ತಕ್ಷಣವೇ ವಿತರಿಸಲಾಗುತ್ತಿದೆ.

 

ಪ್ರಕೃತಿ ವಿಕೋಪದ ತುರ್ತು ಸಂದರ್ಭದಲ್ಲಿ ನಮ್ಮ ನೆರವಿಗೆ ಧಾವಿಸಿದ ಭಾರತೀಯ ಸೇನೆಯ ಯೋಧರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್, ಗೃಹರಕ್ಷಕ ದಳ ಸಿಬ್ಬಂದಿ ತಮ್ಮ ಪ್ರಾಣ ಪಣಕ್ಕಿಟ್ಟು ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ವಾಯುಸೇನೆ ಹಾಗೂ ನೌಕಾಸೇನೆಯ ಒಟ್ಟು ಐದು ಹೆಲಿಕಾಪ್ಟರ್‍ಗಳನ್ನು ಬಳಕೆ ಮಾಡಲಾಗಿದೆ. ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗೆ ಹಗಲಿರುಳು ಶ್ರಮಿಸಿದ ಭಾರತೀಯ ಸೇನೆ, ಪೊಲೀಸ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘ-ಸಂಸ್ಥೆಗಳ ಸ್ವಯಂ ಸೇವಕರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸೋಣ.

ಸಿಹಿ ಸುದ್ದಿ 

 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಮುಖ್ಯಮಂತ್ರಿಯಾಗಿ ಜುಲೈ 26, 2019 ರಂದು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರು ಹಾಗೂ ನೇಕಾರರಿಗೆ ಸಿಹಿ ಸುದ್ದಿ ನೀಡಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮಾದರಿಯಲ್ಲೇ ಕರ್ನಾಟಕ ಸರ್ಕಾರದಿಂದಲೂ ಪ್ರತ್ಯೇಕವಾಗಿ ಫಲಾನುಭವಿ ರೈತರಿಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ಎರಡು ಕಂತುಗಳಲ್ಲಿ ಕಂತುಗಳಲ್ಲಿ ಒಂದು ವರ್ಷಕ್ಕೆ ಒಟ್ಟು ನಾಲ್ಕು ಸಾವಿರ ರೂಪಾಯಿ ನೀಡಲಾಗುವುದು. ಇದರಿಂದ ರಾಜ್ಯದ 60.53 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.
ಅದೇ ರೀತಿ 2019ರ ಮಾರ್ಚ ಅಂತ್ಯಕ್ಕೆ ಅನ್ವಯವಾಗುವಂತೆ ನೇಕಾರರ 100 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಘೋಷಣೆ ಮಾಡಿರುತ್ತಾರೆ. ಇದರಿಂದ ರಾಜ್ಯದ 29,631 ನೇಕಾರರಿಗೆ ಅನುಕೂಲವಾಗಲಿದೆ. ಮೀನುಗಾರರ 60 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗುತ್ತಿದ್ದು, ಇದರಿಂದ 23,507 ಮೀನುಗಾರರಿಗೆ, ಅದರಲ್ಲೂ ವಿಶೇಷವಾಗಿ ಮಹಿಳಾ ಮೀನುಗಾರರಿಗೆ ಪ್ರಯೋಜನವಾಗಲಿದೆ.
ಇದಲ್ಲದೇ ರೈತರು ಬೆಳೆದಿರುವ ಹಸಿರು ಮೇವು ಖರೀದಿ ದರವನ್ನು ಪ್ರತಿ ಟನ್‍ಗೆ 3 ಸಾವಿರದಿಂದ 4 ಸಾವಿರ ರೂಪಾಯಿಗಳಿಗೆ ಸರ್ಕಾರವು ಹೆಚ್ಚಿಸಿದೆ.

 2.35 ಲಕ್ಷ ಹೆಕ್ಟೇರ್ ಬೆಳೆ ಜಲಾವೃತ

ಈ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲಿ ಸರ್ಕಾರ ಕೈಗೊಂಡಿರುವ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಪ್ರಸ್ತುತ ಪೂರ್ವ ಮುಂಗಾರಿನಲ್ಲಿ ಪ್ರತಿಶತ 71 ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಪ್ರಾರಂಭವಾಗಲು ಸ್ವಲ್ಪ ಹಿನ್ನಡೆಯಾಗಿತ್ತು.
ಜೂನ್ ಮತ್ತು ಜುಲೈ ತಿಂಗಳಲ್ಲಿ ಬಂದಂತಹ ಮಳೆ ರೈತರಿಗೆ ಅನುಕೂಲಕರವಾಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಶೇ.490 ರಷ್ಟು ಹೆಚ್ಚು ಮಳೆಯಾಗಿದೆ.
ಇದರಿಂದಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಹಾಗೂ ಅಣೆಕಟ್ಟೆಗಳಿಂದ ನಿರಂತರವಾಗಿ ಬಿಡುಗಡೆಯಾಗುತ್ತಿರುವ ಹೆಚ್ಚಿನ ಪ್ರಮಾಣದ ನೀರಿನಿಂದ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ಒಟ್ಟು ಬಿತ್ತನೆಯಾದ 6.09 ಲಕ್ಷ ಹೆಕ್ಟೇರ್ ಕ್ಷೇತ್ರದ ಪೈಕಿ ಸುಮಾರು 2.35 ಲಕ್ಷ ಹೆಕ್ಟೇರ್‍ಗಿಂತ ಹೆಚ್ಚು ಪ್ರದೇಶದಲ್ಲಿ ಮುಂಗಾರು ಬೆಳೆಗಳು ಜಲಾವೃತಗೊಂಡಿರುತ್ತವೆ.
ಮುಂಗಾರು ಬೆಳೆಗಳು ಜಲಾವೃತಗೊಂಡಿರುವುದರಿಂದ ಜಿಲ್ಲೆಯಲ್ಲಿ ಒಟ್ಟು 2341 ಕೋಟಿ ರೂಪಾಯಿ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ನೀರು ಇಳಿದ ನಂತರ ಜಂಟಿ ಸಮೀಕ್ಷೆ ಕೈಗೊಂಡ ಮೇಲೆ ನಿಖರವಾದ ಬಾಧಿತ ಕ್ಷೇತ್ರವನ್ನು ಹಾಗೂ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಒಟ್ಟು 1.61 ಲಕ್ಷ ರೈತರಿಗೆ  8.99  ಕೋಟಿ ರೂ.ಗಳ ಅನುದಾನದಲ್ಲಿ 42837 ಕ್ವಿಂಟಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 1.15 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಪೂರೈಕೆಯಾಗಿದೆ. ಸದ್ಯಕ್ಕೆ ರಸಗೊಬ್ಬರದ ಕೊರತೆ ಇರುವುದಿಲ್ಲ.
ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ 3 ಸಮಾನ ಕಂತುಗಳಲ್ಲಿ ವಾರ್ಷಿಕವಾಗಿ ಆರು ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು. ಸದರಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5 ಲಕ್ಷ ರೈತರನ್ನು ನೋಂದಣಿ ಮಾಡಲಾಗಿದೆ. ಅಲ್ಲದೆ, ಈವರೆಗೆ 5,435 ಲಕ್ಷ ರೂ.ಗಳನ್ನು 2.69 ಲಕ್ಷ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ.
2019 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
2019-20 ನೇ ಸಾಲಿನಿಂದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು 1391 ರೈತರ ತಾಕಿನಲ್ಲಿ ಸದರಿ ಕೃಷಿ ಪದ್ಧತಿಯನ್ನು ಪ್ರಾತ್ಯಕ್ಷಿಕೆಗಳ ಮೂಲಕ ಕೈಗೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗಿರುತ್ತದೆ.
ಕಳೆದ 5 ವರ್ಷಗಳಲ್ಲಿ ತೋಟಗಾರಿಕೆ ಕ್ಷೇತ್ರವು ಶೇ. 11.55 ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದರಿಂದ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ತೋಟಗಾರಿಕೆ ಜಿಲ್ಲೆಯೆಂದು ಪ್ರಸಿದ್ಧವಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಸರಾಸರಿ ಪ್ರತಿ ತಿಂಗಳು 17,979 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆ ಆಗುತ್ತದೆ. ಸದರ ಹಂಚಿಕೆ ಆಗುವ ಪ್ರಮಾಣವನ್ನು ಪ್ರತಿ ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿ ಹಾಗೂ ಆಧ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಯುನಿಟ್‍ಗೆ 7 ಕೆ.ಜಿಯಂತೆ ಉಚಿತವಾಗಿ ಅಕ್ಕಿಯನ್ನು ವಿತರಿಸುವ ಕ್ರಮವಹಿಸಲಾಗುತ್ತದೆ.

34 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

2018-19ನೇ ಸಾಲಿನಲ್ಲಿ 5 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹಾಗೂ 2019-20ರಲ್ಲಿ 3 ಕರ್ನಾಟಕ ಪಬ್ಲಿಕ್ ಶಾಲೆಗಳು ಸೇರಿದಂತೆ ವಿಧಾನ ಸಭಾ ಮತಕ್ಷೇತ್ರಕ್ಕೆ ಒಂದರಂತೆ ಒಟ್ಟು 8 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ.
2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 34 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಒಂದನೇಯ ತರಗತಿಗಳನ್ನು ಪ್ರಾರಂಭಿಸಲಾಗಿದೆ.
ಸರ್ಕಾರಿ/ಅನುದಾನಿತ 8 ನೇ ತರಗತಿಯಲ್ಲಿ ಓದುತ್ತಿರುವ ಬೆಳಗಾವಿ ಜಿಲ್ಲೆಯ ಒಟ್ಟು 56,996 ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಿಸಲಾಗುವುದು.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 1 ರಿಂದ 10 ನೇ ತರಗತಿಯ ಒಟ್ಟು 4.57 ಲಕ್ಷ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಲಾಗುವುದು.
ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ಮಾರಾಟ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 59.48 ಲಕ್ಷ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಪರಿಶಿಷ್ಠ ಜಾತಿ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಸ್ವಯಂ ಉದ್ಯೋಗ ಹೊಂದಲು ಜಿಲ್ಲಾ ಪಂಚಾಯತ ಸಹಕಾರದೊಂದಿಗೆ ಜಿಲ್ಲಾ ವಲಯದಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳಿಂದ ಕೃಷಿ, ತೋಟಗಾರಿಕೆ ಮತ್ತು ಪಶು ಸಂಗೊಪನೆ ಇಲಾಖೆಗಳ ಮೂಲಕ ಸಹಾಯಧನವನ್ನು ಒದಗಿಸಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ.
2019-20ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆಗಳಿಗೆ ಜೂನ್-2019ರ ಅಂತ್ಯದವೆರೆಗೆ ಒಟ್ಟು ರೂ. 10.30 ಕೋಟಿ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ ರೂ. 1.90 ಕೋಟಿ ಅನುದಾನ ಖರ್ಚಾಗಿರುತ್ತದೆ. ಅದೇ ರೀತಿಯಾಗಿ ತಾಲ್ಲೂಕಾ ಪಂಚಾಯತ್ ಲೆಕ್ಕ ಶೀರ್ಷಿಕೆಗಳಿಗೆ ರೂ.9.06 ಕೋಟಿ  ಇಲಾಖೆಗೆ ಬಿಡುಗಡೆಯಾಗಿದ್ದು, ಅದರಲ್ಲಿ ರೂ. 3.07 ಕೋಟಿ ಖರ್ಚು ಭರಿಸಲಾಗಿರುತ್ತದೆ.

1.20 ಲಕ್ಷ ಫಲಾನುಭವಿಗಳು 

2018-19 ನೇ ಸಾಲಿಗೆ ಬೆಳಗಾವಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಿಲ್ಲಾ/ ತಾಲೂಕು ವಲಯದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಶೇಕಡಾ 100% ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.
2019-20ನೇ ಸಾಲಿನಲ್ಲಿ ಜೂನ್ ಅಂತ್ಯದವರೆಗೆ ಒಟ್ಟು ಅನುದಾನದಲ್ಲಿ 4.29 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಇದರಿಂದ 1.20 ಲಕ್ಷ ಫಲಾನುಭವಿಗಳು ಲಾಭ ಪಡೆದಿರುತ್ತಾರೆ.
ಅಲ್ಪಸಂಖ್ಯಾತರ ಹೆಣ್ಣು ಮಕ್ಕಳಿಗೆ ಅವರ ಮದುವೆಗಾಗಿ ಸಹಾಯಧನ ನೀಡುವ “ಬಿದಾಯಿ” ಯೋಜನೆ ಅತಿ ಹೆಚ್ಚು ಜನಮನ್ನಣೆ ಗಳಿಸಿದೆ. ಮಹಿಳಾ ಉದ್ದೇಶಿತ ಈ ಯೋಜನೆಯಿಂದ 2018-19ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ 530 ಮುಸ್ಲಿಂ, ಜೈನ್ 164 ಹಾಗೂ 08 ಕ್ರಿಶ್ಚಿಯನ್ ಹೀಗೆ ಒಟ್ಟು 702 ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಇದಕ್ಕಾಗಿ ಒಟ್ಟು ರೂ.3.51 ಕೋಟಿ ವೆಚ್ಚವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ 5294 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕ್ಷೀರಭಾಗ್ಯ ಯೋಜನೆ ಚಾಲ್ತಿಯಲ್ಲಿದ್ದು, 6 ತಿಂಗಳಿನಿಂದ 6 ವರ್ಷದವರೆಗಿನ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ವಿತರಿಸಲಾಗುತ್ತಿದೆ.
ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ಬಿಸಿಯೂಟ ನೀಡುವ ನೀಡುವ ಮಾತೃಪೂರ್ಣ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸ್ತುತ 35641 ಗರ್ಭಿಣಿಯರು ಹಾಗೂ 33061 ಬಾಣಂತಿಯರು ಸೌಲಭ್ಯ ಪಡೆಯುತ್ತಿದ್ದಾರೆ.
ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿಗಳ ಪರಿಪಕ್ವ ಮೊತ್ತ ದೊರೆಯುವಂತೆ ಬೆಳಗಾವಿ ಜಿಲ್ಲೆಗೆ ಇಲ್ಲಿಯವರೆಗೆ 237135 ಫಲಾನುಭವಿಗಳಿಗೆ ಮಂಜೂರಿ ನೀಡಿದ್ದು, ಇಲ್ಲಿಯವರೆಗೆ 217704 ಬಾಂಡ್‍ಗಳನ್ನು ವಿತರಣೆ ಮಾಡಲಾಗಿದೆ.

ಹಂತ ಹಂತವಾಗಿ ಸಾಲ ಮನ್ನಾ

ಬೆಳಗಾವಿ ಜಿಲ್ಲೆಯು ಸಹಕಾರ ಜಿಲ್ಲೆಯಾಗಿದ್ದು ರಾಜ್ಯದಲ್ಲಿ ಸಹಕಾರ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ. ಪ್ರಸಕ್ತ ನಮ್ಮ ಜಿಲ್ಲೆಯಲ್ಲಿ ಸುಮಾರು 5588 ವಿವಿಧ ರೀತಿಯ ಸಹಕಾರ ಸಂಘಗಳು ಹಾಗೂ 1039 ಸೌಹಾರ್ದ ಸಹಕಾರಿಗಳು ಕೆಲಸ ನಿರ್ವಹಿಸುತ್ತಿವೆ.
ಡಿಸಿಸಿ ಬ್ಯಾಂಕುಗಳು ಹಾಗೂ ಪಿಕಾರ್ಡ ಬ್ಯಾಂಕುಗಳಿಂದ ಅಲ್ಪಾವಧಿ ಸಾಲ ಪಡೆದು ದಿ: 10/07/2018 ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಟ ರೂ. 1.00 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿರುತ್ತದೆ.
ಈ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 2 ಲಕ್ಷ 88 ಸಾವಿರ ರೈತರ ಸಾಲ ರೂ. 1293 ಕೋಟಿ ಮನ್ನಾ ಆಗುವ ಬಗ್ಗೆ ಅಂದಾಜಿಸಲಾಗಿದೆ. ಇದುವೆರೆಗೆ ಜಿಲ್ಲೆಯ 89810 ರೈತರಿಗೆ 310 ಕೋಟಿ ಅನುದಾನ ರೈತರ ಖಾತೆಗೆ ಜಮಾ ಮಾಡಲಾಗಿರುತ್ತದೆ.
ಹಂತ ಹಂತವಾಗಿ ಸಾಲ ಮನ್ನಾ ಮೊತ್ತವನ್ನು ಸಂಬಂಧಪಟ್ಟ ರೈತ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗುತ್ತಿದೆ.
ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. 2019-20 ನೇ ಸಾಲಿನ ಜೂನ್ ಅಂತ್ಯದವರೆಗೆ  1 ಲಕ್ಷ 87 ಸಾವಿರ ರೈತರಿಗೆ ರೂ. 767 ಕೋಟಿ ಬೆಳೆ ಸಾಲ ವಿತರಿಸಲಾಗಿದೆ.
2019-20 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 34 ಸಾವಿರ 487 ರೈತ ಸದಸ್ಯರಿಂದ 1 ಕೋಟಿ 74 ಲಕ್ಷ ಲೀಟರ್ ಹಾಲು ಸಂಗ್ರಹಿಸಿಸಲಾಗಿರುತ್ತದೆ. 2018-19 ನೇ ಸಾಲಿನಲ್ಲಿ ಒಟು ರೂ. 39 ಕೋಟಿ 47 ಲಕ್ಷ ಪ್ರೋತ್ಸಾಹದನವನ್ನು ರೈತರಿಗೆ ನೀಡಲಾಗುತ್ತಿದೆ.

ಆಸ್ಪತ್ರೆ  ನಿರ್ಮಾಣ

ಆರೋಗ್ಯ ಇಲಾಖೆಯಿಂದ ಚಿಕ್ಕೋಡಿಯಲ್ಲಿ 100, ಸವದತ್ತಿಯಲ್ಲಿ 60 ಮತ್ತು ನಿಪ್ಪಾಣಿಯಲ್ಲಿ 30 ಹಾಸಿಗೆಗಳ 3 ತಾಯಿ ಮತ್ತು ಮಕ್ಕಳ ಆಸ್ಪತ್ರೆ  ನಿರ್ಮಾಣ ಕಾಮಗಾರಿಗಳಿಗಾಗಿ ಅಂದಾಜು 39 ಕೋಟಿ ರೂಪಾಯಿ ಮಂಜೂರಾಗಿದ್ದು ಇಲ್ಲಿಯವರೆಗೆ 6. 85 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 1 ಸೂಪರ್ ಸ್ಪೆಷಾಲಿಟಿÀ ಆಸ್ಪತ್ರೆಯ ನಿರ್ಮಾಣಕ್ಕಾಗಿ ರೂ 140 ಕೋಟಿ ರೂಪಾಯಿ ಮಂಜೂರಾಗಿದ್ದು, ಇಲ್ಲಿಯವರೆಗೆ 24.25 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 30 ಜೂನ್ 2019 ವರೆಗೆ ಒಟ್ಟು 3655 ಫಲಾನುಭವಿಗಳಿಗೆ ರೂ. 9.68 ಕೋಟಿ ವಿನಿಯೋಗಿಸಲಾಗಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ವತಿಯಿಂದ ಕೈಗಾರಿಕೆಗಳ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ  2018-19 ನೇ ಸಾಲಿನಲ್ಲಿ 104 ನಿರುದ್ಯೋಗಿ ಯುವಕ ಯುವತಿಯರಿಗೆ ಸಾಲ ಮಂಜೂರಾತಿಯಾಗಿರುತ್ತದೆ. ಇದರಿಂದ ಸುಮಾರು  416 ಜನ  ನಿರುದ್ಯೋಗಿಗಳಿಗೆ  ಉದ್ಯೋಗಾವಕಾಶ ದೊರಕಿರುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 6 ನೀರಾವರಿ ಯೋಜನೆಗಳು, 7 ಏತ ನೀರಾವರಿ ಯೋಜನೆಗಳು, 5 ಕೆರೆ ತುಂಬಿಸುವ ಯೋಜನೆ, 1 ಸೇತುವೆ ನಿರ್ಮಾಣ ಹಾಗೂ 2 ಆಧುನಿಕರಣ ಯೋಜನೆ ಸೇರಿದಂತೆ ಒಟ್ಟು 21 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಮಾರ್ಕಂಡೇಯ ಯೋಜನೆಯಿಂದ 14383 ಹೆಕ್ಟೇರ್ ತೂಬುಗಾಲುವೆ ಕ್ಷೇತ್ರವನ್ನು ಹಾಗೂ 10915 ಹೆಕ್ಟೇರ್ ಹೊಲಗಾಲುವೆ ಕ್ಷೇತ್ರವನ್ನು ನಿರ್ಮಿಸಲಾಗಿದೆ. ಮಾರ್ಕಂಡೇಯ ಆಣೆಕಟ್ಟು (ಕರ್ಟನ್ ಗ್ರೌಟಿಂಗ್ ಹೊರತುಪಡಿಸಿ), ಬಲದಂಡೆ ಹಾಗೂ ಎಡದಂಡೆ ಕಾಲುವೆ ಹಾಗೂ ಹಂಚು ಕಾಲುವೆ ಕಾಮಗಾರಿ ಪೂರ್ಣಗೊಂಡಿವೆ. ಹೊಲಗಾಲುವೆ ಕಾಮಗಾರಿ ಪ್ರಗತಿಯಲ್ಲಿದೆ.
ದೂಧಗಂಗಾ ಯೋಜನೆಯಿಂದ ಒಟ್ಟು 15167 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿತ್ತು, ಇದರಡಿ 15167 ಹೆಕ್ಟೇರ್ ತೂಬುಗಾಲುವೆ ಕ್ಷೇತ್ರವನ್ನು ಹಾಗೂ 3451 ಹೆಕ್ಟೇರ್ ಹೊಲಗಾಲುವೆ ಕ್ಷೇತ್ರವನ್ನು ನಿರ್ಮಿಸಲಾಗಿದೆ. ಈ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.
ಈ ವಲಯದಡಿ ಬರುವ ಪ್ರಗತಿಯಲ್ಲಿರುವ/ ಪೂರ್ಣಗೊಂಡ ಯೋಜನೆಯಿಂದ ಒಟ್ಟು 5.53 ಲಕ್ಷ ಹೆಕ್ಟೇರ್ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿತ್ತು, ಈ ಪೈಕಿ ಇಲ್ಲಿಯವರೆಗೆ 4.18 ಲಕ್ಷ  ಹೆಕ್ಟೇರ್ ಪ್ರದೇಶಕ್ಕೆ ತೂಬುಗಾಲುವೆ ಪ್ರಗತಿ ಸಾಧಿಸಲಾಗಿದೆ ಹಾಗೂ 3.77 ಲಕ್ಷ ಹೇಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ ಪ್ರಗತಿ ಸಾಧಿಸಲಾಗಿದೆ.
ಜಿಲ್ಲಾ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಯೋಜನೆಯಡಿ 2019-20ನೇ ಸಾಲಿಗೆ ಬೆಳಗಾವಿ ಜಿಲ್ಲೆಯಲ್ಲಿ  ಭೌತಿಕವಾಗಿ 2413 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ 2273 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 111 ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ. ಈ ಕಾಮಗಾರಿಗಳಿಗೆ ರೂ.679 ಕೋಟಿ ಅಂದಾಜು ಮೊತ್ತ ನಿಗದಿಪಡಿಸಲಾಗಿರುತ್ತದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸನ್ 2019-20ನೇ ಸಾಲಿಗೆ ರೂ.338 ಕೋಟಿ ಅಂದಾಜು ಮೊತ್ತ ನಿಗದಿಪಡಿಸಲಾಗಿದೆ. ಭೌತಿಕವಾಗಿ ಒಟ್ಟು 27 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 21 ಕಾಮಗಾರಿಗಳು ಮುಕ್ತಾಯವಾಗಿರುತ್ತವೆ.
ಬೆಳಗಾವಿ ಜಿಲ್ಲೆಗೆ ಸರ್ಕಾರದಿಂದ ಒಟ್ಟು 1350 ಶುದ್ದಿಕರಣ ಘಟಕಗಳು ಮಂಜೂರಾಗಿರುತ್ತವೆ. ಅದರಲ್ಲಿ 1264 ಶುದ್ಧೀಕರಣ ಘಟಕಗಳು ಸ್ಥಾಪಿಸಲಾಗಿದೆ. 1072 ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಯೋಜನೆಯಡಿ ಇಲ್ಲಿಯವರಗೆ  5.97 ಲಕ್ಷ  ಕುಟುಂಬಗಳು ನೋಂದಣಿಯಾಗಿರುತ್ತವೆ 5.97  ಲಕ್ಷ ಉದ್ಯೋಗ ಚೀಟಿಗಳನ್ನು  ವಿತರಿಸಲಾಗಿರುತ್ತದೆ.  2019-20 ನೇ ಸಾಲಿನಲ್ಲಿ ಆರ್ಥಿಕ ಗುರಿ ರೂ. 522 ಕೋಟಿ ಹಾಗೂ ಭೌತಿಕ ಗುರಿ 118.82 ಲಕ್ಷಗಳ ಮಾನವ ದಿನಗಳ ಸೃಜನೆಯ ನಿಗದಿಪಡಿಸಲಾಗಿರುತ್ತದೆ.
ದಿನಾಂಕ 18 ಜುಲೈ 2019 ರ ಅಂತ್ಯದವರೆಗೆ  ರೂ.13.84 ಕೋಟಿ ವೆಚ್ಚ   ಭರಿಸಿ 36.90 ಲಕ್ಷಗಳಷ್ಟು  ಮಾನವ ದಿನಗಳನ್ನು ಸೃಜಿಸಿ ಶೇ 31.06 ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ.  ಅದರಂತೆ 1.37 ಲಕ್ಷ ಕುಟುಂಬಗಳಲ್ಲಿ  2.09 ಲಕ್ಷ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿರುತ್ತದೆ.

ಅಮೃತ ಯೋಜನೆ

ಬೆಳಗಾವಿ ನಗರಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ “ಅಮೃತ ಯೋಜನೆಯಡಿಯಲ್ಲಿ ಒಳಚರಂಡಿ ಯೋಜನೆ, 24*7 ರ ಸತತ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ನಗರದ ಹಸಿರು ವಲಯ ಸುಧಾರಣೆಗಾಗಿ 2 ಉದ್ಯಾನವನಗಳನ್ನು ಕೈಗೆತ್ತಿಕೊಳ್ಳಲಾಗಿದೆ.
  ಮೇಲಿನ ಎಲ್ಲ ಅಮೃತ ಕಾಮಗಾರಿಗಳನ್ನು ಒಟ್ಟಾರೆಯಾಗಿ ರೂ. 625.00 ಕೋಟಿ ಅನುದಾನದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ ಪ್ರತಿಶತ 50 ರಷ್ಟು, ರಾಜ್ಯ ಸರ್ಕಾರ ಪ್ರತಿಶತ 20 ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿಶತ 30 ರಷ್ಟು ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಕರ್ನಾಟಕ ಸರ್ಕಾರವು, ಬೆಳಗಾವಿ ಮಹಾನಗರ ಪಾಲಿಕೆಗೆ 2019-20 ನೇ ಸಾಲಿಗೆ ಎಸ್ ಎಫ್ ಸಿ ಅನುದಾನದಡಿ ರೂ. 1,259.00 ಲಕ್ಷ ಮಂಜೂರಾಗಿದ್ದು, ಹಾಗೂ 14 ನೇ ಹಣಕಾಸಿನ ಆಯೋಗದ ಅನುದಾನದಡಿ ರೂ.2,182.00 ಲಕ್ಷ ಮಂಜೂರಾಗಿದೆ, ಸದರಿ ಅನುದಾನಗಳಿಗೆ ಈಗಾಗಲೇ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು, ಕಾಮಗಾರಿಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವದು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಸ್ಥಳೀಯ ಯೋಜನಾ ಪ್ರದೇಶದಲ್ಲಿ ಒಳಗೊಂಡ ಕಣಬರ್ಗಿ ಗ್ರಾಮದ ಸರ್ವೆ ನಂಬರುಗಳನ್ನು ಒಳಗೊಂಡ 157 ಎಕರೆ 01ಗುಂಟೆ 08ಆಣೆ (ಖರಾಬ ಕ್ಷೇತ್ರ: 02 ಎಕರೆ 22 ಗುಂಟೆಯನ್ನು ಹೊರತು ಪಡಿಸಿ) ಪ್ರದೇಶದಲ್ಲಿ ವಸತಿ ಬಡಾವಣೆ ಸಂಖ್ಯೆ. 61 ನ್ನು ರೂಪಿಸಿ, ಅಭಿವೃದ್ಧಿ ಪಡಿಸುವ ಕುರಿತು ಯೋಜನೆ ಹಮ್ಮಿಕೊಳ್ಳಲಾಗಿರುತ್ತದೆ. ನ್ಯಾಯಾಲಯದಲ್ಲಿ ಇರುವ ವ್ಯಾಜ್ಯವನ್ನು ಬಗೆಹರಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕ್ರಮ ಜರುಗಿಸಲಾಗುತ್ತಿದೆ.
ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶವು ಸ್ವತಂತ್ರಗೊಂಡು ಈ 72 ವಸಂತ ಗಳಲ್ಲಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಹಾಗೂ ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂತಹ ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ ದೇಶದ ಏಕತೆ-ಸಮಗ್ರತೆಯ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರ್ಯ ವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ.
ಪ್ರವಾಹದಿಂದ ಸಂತ್ರಸ್ತರಾಗಿರುವ ನಮ್ಮ ಸಹೋದರ-ಸಹೋದರಿಯರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ಬೆಳೆ ಹಾನಿಯಿಂದ ತತ್ತರಿಸಿರುವ ರೈತರಿಗೆ ಸೂಕ್ತ ನೆರವು ಒದಗಿಸುವ ಮೂಲಕ ಅವರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button