
ಪ್ರಗತಿವಾಹಿನಿ ಸುದ್ದಿ: ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.
ಓಂಕಾರ್ ಪವಾರ್ (25) ಮೃತ ವೃಕ್ತಿ. ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಬಳ ಕೊಟ್ಟಿಲ್ಲ ಎಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಆಸ್ಪತ್ರೆಯವರು ಸಂಬಳ ನೀಡದೇ ಸತಾಯಿಸುತ್ತಿದ್ದರು. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇರಲಿಲ್ಲ. ಇದರಿಂದ ತೀವ್ರವಾಗಿ ಮನನೊಂದ ಓಂಕಾರ್, ಡೆತ್ ನೋಟ್ ಬರೆದಿಟ್ಟು ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಓಂಕಾರ್ ಗೆ ಪುಟ್ಟ ಮಗು ಕೂಡ ಇದೆ. ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಓಂಕಾರ್ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಆಸ್ಪತ್ರೆ ವಿರುದ್ಧ ಕುಟುಂಬದವರು, ಆಂಬುಲೆನ್ಸ್ ಚಾಲಕ ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.