ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬ ಊಹಾಪೋಹಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೆರೆ ಎಳೆದಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಈ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಗ್ರೀನ್ ಸಿಗ್ನಲ್ ನೀಡಿರುವುದಾಗಿ ಖಚಿತಪಡಿಸಿದ್ದಾರೆ.
ಆದರೆ ಎಷ್ಟು ಸೀಟುಗಳ ಹಂಚಿಕೆಯಾಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡವರು ಬೇಡಿಕೆ ಇಟ್ಟಿದ್ದಾರೆ. ಆದರೆ ಸದ್ಯ ನಾಲ್ಕು ಸೀಟುಗಳನ್ನು ಬಿಟ್ಟುಕೊಡಲು ಅಮಿತ್ ಶಾ ತಾತ್ಕಾಲಿಕವಾಗಿ ಸಮ್ಮತಿಸಿದ್ದಾರೆ. ಸೀಟು ಹಂಚಿಕೆ ತೀರ್ಮಾನ ಶೀಘ್ರವೇ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಇದೇ ವಿಷಯ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಇದೊಂದು ಮಹತ್ವದ ಮೈತ್ರಿಗಾಗಲಿದೆ. ಕಾಂಗ್ರೆಸ್ ವಿರುದ್ಧ ಹೋರಾಡುವಲ್ಲಿ ಪ್ರತಿಪಕ್ಷಗಳ ಒಗ್ಗೂಡುವಿಕೆ ಪ್ರಮುಖವಾಗಲಿದೆ. ಮೈತ್ರಿ ಸ್ಥಾನಗಳ ಹಂಚಿಕೆ ಕುರಿತಂತೆ ಶೀಘ್ರವೇ ಹೈಕಮಾಂಡ್ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ” ಎಂದು ಹೇಳಿದ್ದಾರೆ.
ಕಳೆದ ವಿದಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷೆ ಮೀರಿ ಕಾಂಗ್ರೆಸ್ ಜಯಭೇರಿ ಬಾರಿಸಿದ ನಂತರ ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರ ಪ್ರಸ್ತಾಪವಾಗಿತ್ತು. ಇವು ಕೇವಲ ಊಹಾಪೋಹ ಎಂಬಂತೆ ಹಲವು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದರಿಂದ ಈ ಬಗ್ಗೆ ಕುತೂಹಲ ಮಾತ್ರ ಉಳಿದಕೊಂಡಿತ್ತು. ಇದೀಗ ಮೈತ್ರಿ ಏರ್ಪಡುವುದು ನಿಚ್ಚಳವಾಗಿದ್ದು ಮುಂದಿನ ಬೆಳವಣಿಗೆಗಳು ಇನ್ನಷ್ಟು ಕಾತುರ ಮೂಡಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ