ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿಗಳು ಮಾತು ಕೊಟ್ಟಂತೆ ಮೀಸಲಾತಿ ಘೋಷಿಸದೆ, ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಕೆರಳಿ ಕೆಂಡವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಅಧಿವೇಶನ ಅಂತ್ಯವಾಗುವ ಮುನ್ನ ಏನು ಮಾಡಬೇಕೆನ್ನುವ ಕುರಿತು ಬುಧವಾರ ರಾತ್ರಿ ಮುಖಂಡರು ಸಭೆ ಸೇರಿ ಚರ್ಚಿಸಿದ್ದಾರೆ.
ಡಿ.29ರಂದು ಸರ್ವಪಕ್ಷ ಸಭೆ ಕರೆಯುವುದಾಗಿಯೂ, ಅದಕ್ಕೂ ಮುನ್ನ ಸಚಿವಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು 30ರಂದು ಮೀಸಲಾತಿ ಘೋಷಣೆ ಮಾಡುವಾಗಿಯೂ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ತಾಯಿ ಮೇಲೆ ಆಣೆ ಮಾಡಿದ್ದಾರೆ. ಹಾಗಾಗಿ ಮೀಸಲಾತಿ ಘೋಷಿಸದೆ ಬೆಂಗಳೂರಿನಿಂದ ತೆರಳಲು ಅವಕಾಶ ನೀಡುವುದಿಲ್ಲ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ ಡಿ.22ರಂದು ನಡೆದ ಬೃಹತ್ ಸಮಾವೇಶದಲ್ಲಿ ತಿಳಿಸಿದ್ದರು. ಡಿ.22ರಂದು ಸುವರ್ಣ ವಿಧಾನಸೌಧವನ್ನು ಕಬ್ಜಾ ತೆಗೆದುಕೊಳ್ಳುತ್ತೇವೆ ಎಂದು ವಿಜಯಾನಂದ ಕಾಶಪ್ಪನವರ್ ಹಲವು ಬಾರಿ ಬಹಿರಂಗ ಸಮಾವೇಶಗಳಲ್ಲಿ ಹೇಳಿದ್ದರು.
ಮೀಸಲಾತಿ ಘೋಷಿಸದಿದ್ದರೆ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವ ತಯಾರಿ ಮೇಲೆ ಬಂದಿದ್ದ ಲಕ್ಷ ಲಕ್ಷ ಜನರು ಯತ್ನಾಳ ಹೇಳಿಕೆಗೆ ತಲೆದೂಗಿ ಒಪ್ಪಿಗೆ ಸೂಚಿಸಿದ್ದರು. ಆದರೆ ಅಧಿವೇಶನವನ್ನು 29ರಂದು ಮುಕ್ತಾಯಗೊಳಿಸಿ ಮುಖ್ಯಮಂತ್ರಿಗಳು ಸೇರಿದಂತೆ ಇಡೀ ಸರಕಾರವೇ ಬೆಳಗಾವಿಯಿಂದ ಹೊರಡುತ್ತಿದೆ. ಸರ್ವ ಪಕ್ಷ ಸಭೆಯನ್ನೂ ನಡೆಸಿಲ್ಲ. ಸಚಿವಸಂಪುಟ ಸಭೆಯಲ್ಲೂ ಮೀಸಲಾತಿಗೆ ಅನುಮೋದನೆ ಪಡೆಯಲಿಲ್ಲ. ಹಾಗಾಗಿ ಮೀಸಲಾತಿ ಘೋಷಿಸದೆ ಬೆಂಗಳೂರಿಗೆ ಕಾಲ್ಕೀಳುವ ಅನುಮಾನ ಪಂಚಮಸಾಲಿ ಮುಖಂಡರಿಗೆ ಬಂದಿದೆ.
ಈಗ ಮೀಸಲಾತಿ ಪಡೆಯದಿದ್ದರೆ ಮತ್ತೆಂದೂ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ಅಂದಿನ ಸಭೆಯಲ್ಲೇ ಹಲವರು ವ್ಯಕ್ತಪಡಿಸಿದ್ದರು. ಈಗ ಹೋರಾಟಗಳೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆಯೇ ಎನ್ನುವ ಆತಂಕ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹೋರಾಟ ಸಮಿತಿಯ ಇತರ ಮುಖಂಡರಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲು ಬುಧವಾರ ರಾತ್ರಿ ಬಸವಜಯ ಮೃತ್ಯುಂಜಯ ಸ್ವಾಮಿಗಳ ಉಪಸ್ಥಿತಿಯಲ್ಲಿ ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಮುಖಂಡರು ಬೆಳಗಾವಿ ಮಹಾತ್ಮಾಗಾಂಧಿ ಭವನದಲ್ಲಿ ಸಭೆ ನಡೆಸಿದ್ದಾರೆ. ಮುಂದಿನ ಹೋರಾಟದ ಕುರಿತು ಚರ್ಚಿಸಲಾಗಿದೆ. ಗುರುವಾರವೇ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕುರಿತು ಚರ್ಚೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಮುಖ್ಯಮಂತ್ರಿಗಳಿಂದ ಯಾವ ರೀತಿಯ ಸಂದೇಶ ಬರಲಿದೆ ಎನ್ನುವುದರ ಮೇಲೆ ಹೋರಾಟಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಬೆಳಗಾವಿ ಅಧಿವೇಶನ ಗುರುವಾರ ಮಧ್ಯಾಹ್ನವೇ ಮುಕ್ತಾಯ; ಸಂಜೆ ಸಚಿವ ಸಂಪುಟ ಸಭೆ
https://pragati.taskdun.com/belgaum-session-ends-on-thursday-afternoon-cabinet-meeting-in-the-evening/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ