ಪ್ರಗತಿವಾಹಿನಿ ಸುದ್ದಿ, ಜೋಧಪುರ: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ- ಭಾರತ ನಡುವಣ ‘ಪ್ರೇಮ ಸಂಬಂಧ’ಗಳು ಸರಣಿಯಾಗಿ ನಡೆಯುತ್ತಿವೆ. ಪಾಕಿಸ್ತಾನದಿಂದ ಭಾರತೀಯ ಪ್ರಿಯಕರನಿಗಾಗಿ ಓಡಿ ಬಂದ ಸೀಮಾ ಹೈದರ್, ಭಾರತದಿಂದ ಪಾಕಿಸ್ತಾನಕ್ಕೆ ಪಲಾಯನಗೈದ ಅಂಜು ಸುದ್ದಿಗಳು ಬಿಸಿಬಿಸಿಯಾಗಿರುವಾಗಲೇ ರಾಜಸ್ಥಾನದ ಜೋಧಪುರದ ವ್ಯಕ್ತಿಯೊಬ್ಬರು ಪಾಕಿಸ್ತಾನದ ಯುವತಿ ಜತೆ ವರ್ಚುವಲ್ ವಿವಾಹದ ಮೂಲಕ ಸುದ್ದಿಯಾಗಿದ್ದಾರೆ.
ಈ ಜೋಡಿಯಲ್ಲಿ ಯುವಕ ಪಾಕಿಸ್ತಾನಕ್ಕೆ ಹೋಗಿಲ್ಲ, ಯುವತಿ ಭಾರತಕ್ಕೆ ಬಂದಿಲ್ಲ. ಎಲ್ಲವೂ ಆನ್ ಲೈನ್ ನಲ್ಲೇ ನಡೆದಿದೆ. ಕರಾಚಿಯ ನಿವಾಸಿ ಅಮೀನಾ, ಜೋಧ್‌ಪುರದ ನಿವಾಸಿ ಅರ್ಬಾಜ್ ಅವರನ್ನು ಆನ್ಲೈನ್ ಮೂಲಕ ವಿವಾಹವಾಗಿದ್ದಾರೆ. ಕಾರಣವಿಷ್ಟೇ. ಅಮೀನಾಗೆ ಭಾರತಕ್ಕೆ ಬರಲು ವೀಸಾ ದೊರೆತಿಲ್ಲ. ಹೀಗಾಗಿ ಅರ್ಬಾಜ್ ಮತ್ತು ಅಮೀನಾ ಆನ್ಲೈನ್ನಲ್ಲಿಯೇ ನಿಕಾಹ ಮಾಡಿಕೊಂಡಿದ್ದಾರೆ.
ಡಿಟಿಪಿ ಆಪರೇಟರ್ ಆಗಿರುವ ಅರ್ಬಾಜ್ ಕುಟುಂಬ ಪಾಕಿಸ್ತಾನದಲ್ಲಿರುವ ಅಮಿನಾ ಕುಟುಂಬದೊಂದಿಗೆ ಈ ಮೊದಲೇ ನಂಟು ಹೊಂದಿತ್ತು. ಅರ್ಬಾಜ್ ಹಾಗೂ ಅಮೀನಾ ಪ್ರೇಮ ಪ್ರಕರಣದ ವಿಷಯ ತಿಳಿಯುತ್ತಲೇ ಅಮೀನಾ ಮನೆಯವರು ಮದುವೆ ಪ್ರಸ್ತಾಪ ಮಾಡಿದ್ದರಿಂದ ಅದಕ್ಕೆ ಖುಷಿಯಿಂದಲೇ ಒಪ್ಪಿಕೊಂಡಿದ್ದೇವೆ ಎಂದು ಅರ್ಬಾಜ್ ತಂದೆ ಮೊಹಮ್ಮದ್ ಅಫ್ಜಲ್ ತಿಳಿಸಿದ್ದಾರೆ.
ಜೋಧ್‌ಪುರದ ಓಸ್ವಾಲ್ ಸಮಾಜ ಭವನದಲ್ಲಿ ಈ ಆನ್ಲೈನ್ ವಿವಾಹ ನಡೆಯಿತು. ಪಾಕಿಸ್ತಾನದಲ್ಲಿ ಮದುವೆಯಾದರೆ ಭಾರತಕ್ಕೆ ಬಂದಾಗ ಮತ್ತೆ ಮದುವೆಯಾಗಬೇಕಾಗುತ್ತದೆ. ಅದಕ್ಕಾಗೇ ಈ ವಿಧಾನ ಬಳಸಲಾಗಿದೆ ಎಂದಿರುವ ಅರ್ಬಾಜ್, ಅಮೀನಾಳನ್ನು ಭಾರತಕ್ಕೆ ತರಲು ಮತ್ತೊಮ್ಮೆ ವಿಸಾಕ್ಕೆ ಅರ್ಜಿ ಸಲ್ಲಿಸುವುದಾಗಿಯೂ ಹೇಳಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ