ನೌಕರರ ಸಮಸ್ಯೆ ಪರಿಹರಿಸುವುದಾಗಿ ಅರುಣ ಶಹಾಪುರ ಭರವಸೆ
ಪ್ರಗತಿವಾಹಿನಿ ಸುದ್ದಿ – ಅಥಣಿ- : ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಇಲಾಖೆ ಜೆ.ಓ.ಸಿ.ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಲೀನ ವಂಚಿತ 530 ಜನ ಬೋಧಕ/ಬೋಧಕೇತರರನ್ನು ವಿಲೀನಾತಿಗೆ ಶೀಘ್ರವಾಗಿ ಪರಿಗಣಿಸಿ ವಿಲೀನಗೊಳಿಸಬೇಕೆಂದು ಕರ್ನಾಟಕ ರಾಜ್ಯ ವಿಲೀನ ವಂಚಿತ ನೌಕರರ ಹೋರಾಟ ಸಮೀತಿ ಒತ್ತಾಯಿಸಿದೆ.
ಅಥಣಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ ಅವರನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ ವಂಚಿತ ನೌಕರರು, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಮಂತ್ರಿಯಾಗಿದ್ದಾಗ ಸರ್ಕಾರವೇ ಜೆ.ಓ.ಸಿ.ಯಲ್ಲಿರುವ 3746 ಜನ ಒಟ್ಟು ಸಿಬ್ಬಂದಿಯನ್ನು ಅವರವರ ವಿದ್ಯಾರ್ಹತೆಗನುಗುಣವಾಗಿ ವಿಲೀನಾತಿ ನೀಡಬೇಕೆಂದು ದಿನಾಂಕ : 18-11-2010 ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು.
ಎಲ್ಲ ನೌಕರರಿಗೂ ವಿಲೀನ ನೀಡುವ ಉದ್ದೇಶಕ್ಕಾಗಿಯೇ ದಿನಾಂಕ : 07-05-2010 ರಂದು ಸರ್ಕಾರವು ಜೆ.ಓ.ಸಿ. ಕೋರ್ಸನ್ನು ಮುಚ್ಚಿತು. ಹೀಗಾಗಿ ಅಲ್ಲಿರುವ ನೌಕರರಿಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ವಿಲೀನಗೊಳಿಸುವುದೊಂದೆ ಮಾರ್ಗವಾಗಿತ್ತು. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಹರೀಶಗೌಡ ಎಲ್ಲ ಸಿಬ್ಬಂದಿಯನ್ನು ವಿಲೀನಗೊಳಿಸುವ ಕುರಿತು ಪ್ರಸ್ತಾವನೆಯನ್ನು ಕೂಡ ಸಲ್ಲಿಸಿದ್ದರು.
ಕೇವಲ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಮಾತ್ರ ವಿಲೀನಾತಿ ನೀಡಿ 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿ ನೌಕರರ ಬದುಕಿಗೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ ಎಂದರು.
ಸರ್ಕಾರವೇ ವೃತ್ತಿ ಶಿಕ್ಷಣ ಇಲಾಖೆಯನ್ನು ಮುಚ್ಚಿರುವುದರಿಂದ 530 ಜನ ಸಿಬ್ಬಂದಿ ಅರೆಕಾಲಿಕ ಹುದ್ದೆಯಿಲ್ಲದೆ, ಸರ್ಕಾರದಲ್ಲಿ ವಿಲೀನಾತಿಯನ್ನು ಹೊಂದದೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ. ಸಿಬ್ಬಂದಿ ನೇಮಕಾತಿ ವಯೋಮಿತಿ ಕೂಡ ಮಿರಿದ್ದಾರೆ. ಬೇರೆ ಇಲಾಖೆಯಲ್ಲಿ ನೇಮಕಾತಿ ಹೊಂದುವ ಅವಕಾಶವೂ ಇಲ್ಲ.
ಹಲವಾರು ವರ್ಷಗಳಿಂದ ಸೇವೆಯಲ್ಲಿ ಇಲ್ಲದೇ ಜೀವನೋಪಾಯ ಕಷ್ಟವಾಗಿದೆ. ಇವರನ್ನು ನಂಬಿಕೊಂಡ ವಯೋವೃದ್ದರಾದ ತಂದೆ ತಾಯಿಗಳು ಹಾಗೂ ಹೆಂಡತಿ ಮಕ್ಕಳಿದ್ದಾರೆ. ಆದಕಾರಣ ಸರ್ಕಾರ ಮಾನವೀಯತೆಯ ಆಧಾರದ ಮೇಲೆ ಅತಂತ್ರ ಸ್ಥಿತಿಯಲ್ಲಿರುವ ಸಿಬ್ಬಂದಿಗೆ ವಿಲೀನಾತಿ ಪ್ರಕ್ರಿಯೆಯಲ್ಲಿ ಪರಿಗಣಿಸಿ ಬದುಕು ಕಟ್ಟಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಸೇವಾ ಖಾಯಂಮಾತಿ ಅಥವಾ ಸೇವಾ ವಿಲೀನಾತಿಗೆ ಸಂಬಂಧಿಸಿದ ಪೂರ್ವ ಪ್ರಕರಣಗಳಲ್ಲಿ 2 ವರ್ಷಗಳ ಸೇವೆಯನ್ನು ಕನಿಷ್ಠ ಮಾನದಂಡವಾಗಿ ಪರಿಗಣಿಸಲಾದ ನಿದರ್ಶನಗಳಿದ್ದರೂ ಸಹ 5 ವರ್ಷಗಳ ಗರಿಷ್ಠ ಸೇವೆಯನ್ನು ನಿಯಮಗಳಲ್ಲಿ ಕೇಳಲಾಗಿದೆ. ವಿಲೀನ ಅರ್ಹತೆಗೆ 2 ವರ್ಷಗಳ ಸೇವೆಯನ್ನು ನಮಗೂ ಪರಿಗಣಿಸಿ ಪಾಸ್ಟ ಪ್ರಾಕ್ಟಿಸ್ಸೀನ ಮುಂದುವರಿಕೆ ಮಾಡಬೇಕು. ಶಾಸನದ ನಿಯಮಗಳಿಂದ ಉಂಟಾದ ಈ ತಾರತ್ಯಮವನ್ನು ತೊಡೆದುಹಾಕಿ ನಮಗೆ ನ್ಯಾಯ ಒದಗಿಸಲು ನಿಯಮಗಳಿಗೆ ತಿದ್ದುಪಡಿ ಮಾಡುವುದು ಅಗತ್ಯವೆಂದಾದಲ್ಲಿ ಆ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಲೀನ ವಂಚಿತ ನೌಕರರ ಹೋರಾಟ ಸಮೀತಿಯ ರಾಜ್ಯಾಧ್ಯಕ್ಷ ಡಾ.ರಾಮಣ್ಣಾ ದೊಡ್ಡನಿಂಗಪ್ಪಗೋಳ, ಸಿಬ್ಬಂದಿಗಳಾದ ಗುರುರಾಜ ಜಾಧವ, ಎಸ್.ಪಿ.ಜಾಧವ ಮುಂತಾದವರು ಉಪಸ್ಥಿತರಿದ್ದರು.///
ಕರ್ನಾಟಕ ರಾಜ್ಯದಲ್ಲಿ ಜೆ.ಓ.ಸಿ. ಸಿಬ್ಬಂದಿಗೆ ಇಂದಿನ ನಮ್ಮ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಮಂತ್ರಿಯಾಗಿದ್ದಾಗ ಜೆ.ಓ.ಸಿ.ಯಲ್ಲಿರುವ 3746 ಸಿಬ್ಬಂದಿಗಳಲ್ಲಿ 3216 ಜನರಿಗೆ ವಿಲೀನಾತಿ ನೀಡಿದ್ದು, ವಿಲೀನ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟ ವಿಲೀನಾತಿಗೆ ಶಾಸನ ರೂಪಿಸಿದ್ದರಿಂದ 530 ಜನ ವಿಲೀನದಿಂದ ವಂಚಿತರಾಗಿದ್ದಾರೆ. ಇವರ ವಿಲೀನಾತಿಗಾಗಿ ವಿಧೇಯಕ ತಿದ್ದುಪಡಿ ಮಾಡಬೇಕಾಗಿದ್ದು, ಈ ಕುರಿತು ಶಿಕ್ಷಣ ಇಲಾಖೆಗೆ ಕಡತ ಮಂಡಿಸುವಂತೆ ಪತ್ರ ಬರೆಯುತ್ತೇನೆ. ಹಾಗೂ ಸಮಸ್ಯೆ ಪರಿಹಾರಕ್ಕಾಗಿ ಯತ್ನಿಸುತ್ತೇನೆ.
-ಅರುಣ ಶಹಾಪುರ, ವಿಧಾನಪರಿಷತ್ ಸದಸ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ