Kannada NewsLatest

ಕಾಂಗ್ರೆಸ್ ಕೆಲಸ 24×7 ಇದ್ದಂತೆ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು – ಸತೀಶ್ ಜಾರಕಿಹೊಳಿ

ಖಾನಾಪುರ ತಾಲೂಕು ಪಂಚಾಯಿತಿ ಪ್ರತಿನಿಧಿಗಳ ಸಭೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ :  2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಬೇಕು. ರಾಜ್ಯದಲ್ಲಿ ಮತ್ತೆ ಬಡವರ ಪರ ಸರ್ಕಾರ ಬರಬೇಕಾದರೆ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮನವಿ ಮಾಡಿದರು.

ಖಾನಾಪುರ ವಿಧಾನಸಭಾ ಮತಕ್ಷೇತ್ರದ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಡಿ.10ರಂದು ಜರುಗುವ ವಿಧಾನಪರಿಷತ್ ಚುನಾವಣೆಗೆ ನಿಮ್ಮೆಲ್ಲರಿಗೂ ಚಿರಪರಿಚಿತರಿರುವ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಲು ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು ನಾಯಕರು, ಮುಖಂಡರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಯಾರಿಗೆ ಗೆಲ್ಲುವ ಶಕ್ತಿ, ಕೆಲಸ ಮಾಡುವ ಸಾಮರ್ಥ್ಯ ಇದೆ. ಅಂತಹ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಸ್ಥಳೀಯ ನಾಯಕರು ಸಭೆ ನಡೆಸಿ, ಒಮ್ಮತದಿಂದ ಚನ್ನರಾಜ್ ಹಟ್ಟಿಹೊಳಿ ಅವರನ್ನು ನೇಮಕ ಮಾಡುವ ಮೂಲಕ ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಹೆಸರು ಸಿಫಾರಸ್ಸು ಮಾಡಲಾಗಿತ್ತು ಎಂದರು.

ಕಳೆದ ಮೂರು ವರ್ಷಗಳಿಂದ ಈ ಭಾಗದ ಶಾಸಕರಾದ ಅಂಜಲಿ ನಿಂಬಾಳ್ಕರ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಸ್ತೆ, ಕೆರೆ ತುಂಬಿಸುವ ಕಾರ್ಯ, ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಆ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿಗೆ ಮತಗಳನ್ನು ನೀಡಬೇಕು ಎಂದು ಮನವಿ ಮಾಡಲು ಆಗಮಿಸಿದ್ದೇವೆ.

ಈ ಹಿಂದೆ ಇದ್ದಂತ ಖಾನಾಪುರ ಶಾಸಕರು ಭಾಷೆಗೆ ಸಿಮಿತವಾಗಿದ್ದರು. ಆದರೆ ಈಗಿರುವ ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳ್ಕರ್ ಇಡೀ ಖಾನಾಪುರ ಒಂದೇ ಎಂಬ ಭಾವನೆಯಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು. ಚನ್ನರಾಜ್ ಹಟ್ಟಿಹೊಳಿ ಶಾಸಕರೊಂದಿಗೆ ಸೇರಿ ಸರ್ಕಾರದ ಯೋಜನೆಗಳನ್ನು ನಿಮಗೆ ತಲುಪಿಸುವ ಕಾರ್ಯವನ್ನು ಮಾಡಲಿದ್ದಾರೆ ಎಂಬ ಭರವಸೆ ನೀಡಿದರು.

ಕಾಂಗ್ರೆಸ್ ಕೆಲಸ 24×7 ಇದ್ದಂತೆ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹತ್ತಿರದ ಬೆಳಗಾವಿಯಲ್ಲಿ ಇರಲಿದ್ದಾರೆ. ಚನ್ನರಾಜ ಹಟ್ಟಿಹೊಳಿ ಇಲ್ಲಿಯೇ ಹುಟ್ಟಿ ಬೆಳೆದವರು. ಆದ್ದರಿಂದ ನಿಮ್ಮ ಕಾರ್ಯವನ್ನು ಮಾಡಿ ಕೊಡಲಿದ್ದಾರೆ. ಆದ ಕಾರಣ ಮತದಾರರು ಮತ ನೀಡಬೇಕು ಎಂದು ವಿನಂತಿಸಿಕೊಂಡರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ,  ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸೋಣ, ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ಸೂಚಿಸುವ ಮೂಲಕ ಪಕ್ಷವನ್ನು ಬಲಪಡಿಸಿ,  ಚನ್ನರಾಜ ಹಟ್ಟಿಹೊಳಿಯವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ. ಸತೀಶ ಜಾರಕಿಹೊಳಿ ಅವರು ಇದ್ದ ಕಡೆ ಬೆಂಬಲಕ್ಕೆ ಯಾವುದೇ ಕೊರತೆಯಿಲ್ಲ ಎನ್ನುವ ಮಾತಿದೆ, ಅವರೊಬ್ಬ ರಾಜ್ಯದ ಹಿರಿಯ ನಾಯಕರಾಗಿದ್ದು, ರಾಜಕೀಯ ಲೆಕ್ಕಾಚಾರ,  ಸಾಕಷ್ಟು ಅನುಭವಗಳು ಅವರಲ್ಲಿದ್ದು,  ಪಕ್ಷದ ಬಲವರ್ಧನೆಯಲ್ಲಿ ಅವರ ಪಾಲು ಹಿರಿಯದಾಗಿದೆ. ಅವರ ನೇತೃತ್ವ ಹಾಗೂ ಮಾರ್ಗದರ್ಶನ ಈ ವಿಧಾನ ಪರಿಷತ್ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ನಮ್ಮ ಪಕ್ಷಕ್ಕೆ ಗೆಲುವು ಖಚಿತವಾಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ, ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ರೈತರು ದೇಶವ್ಯಾಪಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸುಮಾರು 700ಕ್ಕೂ ಹೆಚ್ಚಿನ ರೈತರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು,  ಆ ಎಲ್ಲ ರೈತರನ್ನು ನೆನೆದು ಅವರ ದಿವ್ಯ ಆತ್ಮಗಳಿಗೆ ಶಾಂತಿಯನ್ನು ಕೋರಿ, ಮೌನಾಚರಣೆ ನಡೆಸಲಾಯಿತು.

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಅದಕ್ಕೆ ಪೂರ್ವಭಾವಿಯಾಗಿ ನಡೆಯುತ್ತಿರುವ ಈ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರನ್ನು ಗೆಲ್ಲಿಸಬೇಕಾಗಿದೆ. ಎಲ್ಲರೂ ಒಕ್ಕೊರಲಿನಿಂದ ಆಯ್ಕೆ ಮಾಡಿ ಅಭ್ಯರ್ಥಿ ಅವರಾಗಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಅವರಿಗೆ ನೀಡುವ ಮೂಲಕ ಆರಿಸಿ ತರೋಣ ಎಂದರು.

ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಮಹದೇವ ಕೋಳೆಕರ, ಲಕ್ಷ್ಮಣ ಕೊಳೆಕರ್, ಅನಿತಾ ದಂಡ್ಗಲ್, ಗೀತಾ ಅಂಬಡಗಟ್ಟಿ, ಅಡಿವೇಶ ಇಟಗಿ, ಯುವರಾಜ ಕದಮ್, ಸುರೇಖಾ ಕಲಕರ್ಣಿ, ಕಾರ್ತಿಕ ಪಾಟೀಲ , ಮೃಣಾಲ ಹೆಬ್ಬಾಳಕರ್, ಅಡಿವೇಶ ಇಟಗಿ, ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕದ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಇತರರು ಈ ಸಂದರ್ಭದಲ್ಲಿ ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button