*ಎಟಿಎಂ ಕಳ್ಳತನ ಪ್ರಕರಣ: ಹಣ ಪಡೆಯಲು ಸಾಧ್ಯ ಆಗದೆ ಎಟಿಎಂ ಎಸೆದ ಕಳ್ಳರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದ ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ದೊರತಿದೆ. ಕಳ್ಳರು ತಳ್ಳು ಗಾಡಿ ಮೂಲಕ ಎಟಿಎಂ ಹೊತ್ತೊಯ್ದರು ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಎಟಿಎಂ ಯಂತ್ರವನ್ನು ಕದ್ದು ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದರೂ,ಅದನ್ನು ತೆರೆಯಲು ಸಾಧ್ಯವಾಗದೆ, ಹಣವನ್ನೂ ದೋಚಲು ವಿಫಲರಾಗಿ ಮಷಿನ್ ಅನ್ನು ರಸ್ತೆಯಲ್ಲಿಯೇ ಎಸೆದು ಪರಾರಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.
ಕಳ್ಳರು ಎಟಿಎಂ ಮಷಿನ್ ಅನ್ನು ಗ್ಯಾಸ್ ಕಟ್ಟರ್‌ನಿಂದ ಓಪನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಎಟಿಎಂ ಬಲವಾದ ಭದ್ರತೆ ಹೊಂದಿದ್ದ ಕಾರಣ ಅದನ್ನು ತೆರೆಯಲು ಅವರಿಗೆ ಸಾಧ್ಯವಾಗಿಲ್ಲ. ಕಾರಣ ಕಳ್ಳರು ಕೋಪದಲ್ಲಿ ಮಷಿನ್ ಅನ್ನು ಅರ್ಧ ಕಿಲೋಮೀಟರ್ ದೂರದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು, ಕಳ್ಳತನಕ್ಕೆ ಯತ್ನಿಸಿದ ಖದೀಮರ ಐಡಿಯಾ ಕಂಡು ಪೊಲೀಸರು ದಂಗಾಗಿದ್ದರು. ಕಳ್ಳತನದ ವಿಫಲ ಯತ್ನದ ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ತಲೆಮರೆಸಿಕೊಂಡಿರುವ ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕಮಿಷನರ್ ಭರವಸೆ ನೀಡಿದ್ದಾರೆ.



