Kannada NewsLatestNational

*ತಿರುಮಲ ತಿರುಪತಿ ದೇವಸ್ಥಾನಂ ಡೆಪ್ಯುಟಿ ಇಒ ಮನೆ ಮೇಲೆ ACB ದಾಳಿ: ಅಪಾರ ಪ್ರಮಾಣದ ಅಕ್ರಮ ಆಸ್ತಿ, ಚಿನ್ನಾಭರಣ ಕಂಡು ಅಧಿಕಾರಿಗಳೇ ಶಾಕ್*

ಪ್ರಗತಿವಾಹಿನಿ ಸುದ್ದಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯಲ್ಲಿ ಉಪ ಇಒ ಆಗಿದ್ದ ಮೆಂಡು ಲೋಕನಾಥಮ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸಿಕ್ಕ ಅಪಾರ ಪ್ರಮಣದ ಅಕ್ರಮ ಆಸ್ತಿ, ಚಿನ್ನಾಭರಣಗಳನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಮೆಂಡು ಲೋಕನಾಥಮ್ ಅವರ ನಿವಾಸ ಹಾಗೂ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಬರೋಬ್ಬರಿ 5 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಗುಮಾಸ್ತರಾಗಿ ಟಿಟಿಡಿಗೆ ಸೇರಿದ್ದ ಮೆಂಡು ಲೋಕನಾಥಮ್, ಪ್ರಮುಖ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಉಪ ಇಒ ಹುದ್ದೆಗೆ ಬಡ್ತಿ ಪಡೆದಿದ್ದರು. ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳಲ್ಲಿರುವ ಅವರ ನಿವಾಸಗಳು, ಕಚೇರಿ ಹಾಗೂ ಹತ್ತಿರದ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಸರ್ಕಾರಿ ಲೆಕ್ಕಾಚಾರದ ಪ್ರಕಾರ 5 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಆದರೆ, ಪ್ರಸ್ತುತ ಮುಕ್ತ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಹತ್ತಾರು ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ತನಿಖಾ ತಂಡಗಳು ನಡೆಸಿದ ಪರಿಶೀಲನೆಯಲ್ಲಿ ತಿರುಪತಿ ಸುತ್ತಮುತ್ತಲಿನ ಐಷಾರಾಮಿ ವಿಲ್ಲಾಗಳು, ದುಬಾರಿ ಪ್ಲಾಟ್‌ಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಬೃಹತ್ ಪ್ರಮಾಣದ ಕೃಷಿ ಭೂಮಿಯ ದಾಖಲೆಗಳು ಪತ್ತೆಯಾಗಿವೆ. ಇದರ ಜೊತೆಗೆ ಬ್ಯಾಂಕ್ ಲಾಕರ್‌ಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಇರಿಸಲಾಗಿದ್ದ ಬೃಹತ್ ನಗದು, ಅಪಾರ ಪ್ರಮಾಣದ ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button