ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನ್ಯಾಯಾಂಗ ಸೇವೆಗಳಲ್ಲಿ ಇಂದಿನ ಯುವ ನ್ಯಾಯವಾದಿಗಳಿಗೆ ವಿಪುಲವಾದ ಅವಕಾಶಗಳು ಇವೆ. ವಿದ್ಯಾರ್ಥಿಗಳು ಕಠಿಣವಾದ ಪರಿಶ್ರಮಗೈದು ನ್ಯಾಯಾಧೀಶರಾಗಿ ನೇಮಕಗೊಂಡು ಸಾಮಾಜಿಕ ನ್ಯಾಯವನ್ನುಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಕಾರ್ಯಾಧ್ಯಕ್ಷರಾದ ಬಿ.ವೀರಪ್ಪ ಹೇಳಿದರು.
ಅವರು ಕೆಎಲ್ಇ ಸಂಸ್ಥೆಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಹಾಗೂ ಬೆಳಗಾವಿ ವಕೀಲರ ಸಂಘಗಳ ಸಂಯುಕ್ತಾಶ್ರಾಯದಲ್ಲಿ ‘ನ್ಯಾಯಾಂಗ ಸೇವೆಗಳು – ಅವಕಾಶ ಮತ್ತು ಸವಾಲುಗಳು’ ವಿಷಯದ ಮೇಲೆ ಒಂದು ದಿನದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದಅವರು ‘ನ್ಯಾಯಾಧೀಶರ ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದು ಒಂದು ಉದ್ಯೋಗವಲ್ಲ. ಬದಲಾಗಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವಂತಹ ವಿಶಿಷ್ಟವಾದ ಕಾರ್ಯವಾಗಿದ್ದು ನ್ಯಾಯಾಧೀಶರು ಯಾವುದೇ ಒತ್ತಡ ಹಾಗೂ ಲೋಭಗಳಿಗೆ ಒಳಗಾಗದೆ ನ್ಯಾಯೋಚಿತವಾಗಿ ಕಾರ್ಯನಿರ್ವಹಿಸಬೇಕೆಂದು’ ಕರೆ ನೀಡಿದರು.
ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಬಿ.ಮುರಳೀಧರ ಪೈ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ, ಇಂದಿನ ದಿನಮಾನಗಳಲ್ಲಿ ನ್ಯಾಯಾಂಗ ಸೇವೆಗಳ ಕ್ಷೇತ್ರದಲ್ಲಿ ಆಗಿರುವ ತಾಂತ್ರಿಕ ಬದಲಾವಣೆ ಅಂದರೆ ಇ-ಫೈಲಿಂಗ್, ಆನ್ಲೈನ್ ಸೇವೆಗಳು ಕುರಿತು ವಿಶ್ಲೇಷಿಸಿದರು. ಅವುಗಳನ್ನು ಯುವ ನ್ಯಾಯವಾದಿಗಳು ಸದ್ಬಳಿಕೆ ಮಾಡಿಕೊಳ್ಳುವುದರ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕರ್ನಾಟಕ ವಕೀಲರ ಪರಿಷತ್, ಕಾನೂನು ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ನ್ಯಾಯವಾದಿ ಗೌತಮಚಂದ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಮೊದಲನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಡಿ.ಪವನೇಶ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ನ್ಯಾಯಾಧೀಶರಾಗಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಕಲಿಕಾ ಕೌಶಲಗಳು, ನ್ಯಾಯಾಂಗ ಸೇವೆಗಳಲ್ಲಿನ ಅವಕಾಶಗಳು ಹಾಗೂ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಆರ್.ಎಲ್.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅನಿಲ ಹವಾಲ್ದಾರ, ಬೆಳಗಾವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪ್ರಭು ಶಿವಪ್ಪ ಯತ್ನಟ್ಟಿ, ನ್ಯಾಯವಾದಿ ಶ್ರೀಧರಪ್ರಭು ಉಪಸ್ಥಿತರಿದ್ದರು.
ಕುಮಾರಿ ಹರ್ಷಿತಾ ನಿರೂಪಿಸಿದರು. ಕುಮಾರಿ ತೇಜಸ್ವಿನಿ ಪ್ರಾರ್ಥಿಸಿದರು. ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಜಯಸಿಂಹ ಅವರು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಜ್ಯೋತಿ ಹಿರೇಮಠ ವಂದಿಸಿದರು.
ಗೂಗವಾಡ ಅಪಘಾತ ಪ್ರಕರಣ; ಗೆಳೆಯನನ್ನೇ ಕೊಲೆಗೈದು ಆಕ್ಸಿಡೆಂಟ್ ಕಥೆ ಕಟ್ಟಿದ್ದ ಆರೋಪಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ