Kannada NewsKarnataka NewsLatestPolitics

*ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭರವಸೆಯಾದ ‘ಭಾಗ್ಯಲಕ್ಷ್ಮಿ ಯೋಜನೆ’ಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯನ್ನು ಮುಂದುವರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಎನ್. ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಆರ್ಥಿಕ ನೆರವಿನ ಮೂಲಕ ಸಬಲೀಕರಣಗೊಳಿಸಿ ಸ್ವಾವಲಂಬಿಯಾಗಿ ಮಾಡುವ ಯೋಜನೆ ಇದಾಗಿದೆ. 2006ನೇ ಸಾಲಿನಿಂದ ಈ ಯೋಜನೆ ಅನುಷ್ಠಾನದಲ್ಲಿದೆ ಎಂದು ಹೇಳಿದರು.

ಈ ನಡುವೆ, ಬಿಜೆಪಿಯ ಭಾರತಿ ಶೆಟ್ಟಿ ಅವರು, ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರದ್ದು ಎಂದು ಪ್ರಸ್ತಾಪಿಸಿದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲ; ಇದು ರಾಜ್ಯ ಸರ್ಕಾರದ ಪ್ರತ್ಯೇಕ ಯೋಜನೆ. ಇತ್ತೀಚೆಗೆ ನಮ್ಮ ಸರ್ಕಾರ ಈ ಯೋಜನೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿದೆ ಅಷ್ಟೇ ಎಂದು ತಿಳಿಸಿದರು.

ಭಾಗ್ಯಲಕ್ಷ್ಮೀ ಯೋಜನೆಯಡಿ ಈ ಮೊದಲು ಹೆಣ್ಣು ಮಗುವಿನ ಹೆಸರಿನಲ್ಲಿ ಬಾಂಡ್‌ ನೀಡಲಾಗುತ್ತಿತ್ತು. ಆದರೆ, ಈಗ ಮಗುವಿನ ಹೆಸರಿನಲ್ಲಿ ವಾರ್ಷಿಕ 3 ಸಾವಿರ ರೂಪಾಯಿನಂತೆ 15 ವರ್ಷಗಳವರೆಗೆ ಒಟ್ಟು 45 ಸಾವಿರ ರೂಪಾಯಿಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ.

ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ ಅಂದಾಜು ಪರಿಪಕ್ವ ಮೊತ್ತವನ್ನು ನೀಡಲಾಗುವುದು. ಅಷ್ಟೇ ಅಲ್ಲ, 18 ವರ್ಷ ಪೂರ್ಣಗೊಂಡ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

2006 ರಿಂದ 2024ವರೆಗೆ ಅಂದರೆ ಈವರೆಗೆ 23 ಲಕ್ಷದ 22 ಸಾವಿರದ 267 ಅರ್ಜಿಗಳು ಸುಕನ್ಯಾ ಸಮೃದ್ಧಿ- ಭಾಗ್ಯಲಕ್ಷ್ಮೀ ಯೋಜನೆಯಡಿ ಸ್ವೀಕೃತಗೊಂಡಿವೆ. ಕಳೆದ 9 ತಿಂಗಳಲ್ಲಿ 1 ಲಕ್ಷದ 12 ಸಾವಿರ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲಾಗಿದೆ. ಈವರೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕೃತಗೊಂಡಿವೆ. ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ಬಗ್ಗೆ ಪೋಷಕರಲ್ಲಿ ಯಾವುದೇ ಆತಂಕಬೇಡ; ಬಾಂಡ್‌ ಬಂದಿಲ್ಲವೆಂಬ ಚಿಂತೆಯೂ ಬೇಡ. ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಎಲ್ಲ ಅರ್ಜಿಗಳು ಸ್ವೀಕೃತವಾಗಿವೆ ಎಂದು ಸಚಿವರು ಸದನಕ್ಕೆ ಹೇಳಿದರು.

Related Articles

Back to top button