*ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮಂಜೂರು: ಸಚಿವ ಚಲುವರಾಯಸ್ವಾಮಿ ಆದೇಶ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸ್ಥಾಪಿಸಬೇಕೆಂಬ ರೈತರ ಬಹುದಿನಗಳ ಬೇಡಿಕೆಯನ್ನು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಈಡೇರಿಸಿದ್ದು, ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಸಚಿವರ ಸೂಚನೆ ಮೇರೆಗೆ ಕೃಷಿ ಇಲಾಖೆಯಲ್ಲಿನ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಂಸ್ಥೆ (ಕೆಮಿಕ್) ಸಮಾಪನಗೊಳಿಸಿದಾಗ ಲಭ್ಯವಾದ ಜಂಟಿ ಕೃಷಿ ನಿರ್ದೇಶಕರ ಹುದ್ದೆಯನ್ನು ಪೂರಕ ಸಿಬ್ಬಂದಿಯೊಡನೆ ಜಂಟಿ ಕೃಷಿ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಎಂದು ಮರುವಿನ್ಯಾಸಗೊಳಿಸಿ ಆದೇಶ ಹೊರಡಿಸಲಾಗಿದೆ.
ಹುದ್ದೆಗಳ ವಿವರ:-
ಬೆಂಗಳೂರು ಗ್ರಾಮಾಂತರ ಕೃಷಿ ಕಚೇರಿಗೆ ಜಂಟಿ ಕೃಷಿ ನಿರ್ದೇಶಕರು-1, ಸಹಾಯಕ ಕೃಷಿ ನಿರ್ದೇಶಕರು-2, ಕೃಷಿ ಅಧಿಕಾರಿ-3, ಸಹಾಯ ಆಡಳಿತಾಧಿಕಾರಿ-1, ಅಧೀಕ್ಷಕರು-1, ಪ್ರಥಮ ದರ್ಜೆ ಸಹಾಯಕರು-1, ದ್ವಿತೀಯ ದರ್ಜೆ ಸಹಾಯಕರು-2, ಬೆರಳಚ್ಚುಗಾರರು-1, ವಾಹನ ಚಾಲಕರು-2, ಗ್ರೂಪ್ ಡಿ-3 ಸೇರಿದಂತೆ 17 ಅಧಿಕಾರಿ ಸಿಬ್ಬಂದಿಗಳ ಹುದ್ದೆಗಳನ್ನು ಸೃಜಿಸಲಾಗಿದೆ. ಇದಲ್ಲದೇ 13 ಹುದ್ದೆಗಳನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಉಪ ಕೃಷಿ ನಿರ್ದೇಶಕರ ಕಚೇರಿ ಕೂಡಾ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಒಟ್ಟು 30 ಅಧಿಕಾರಿ ಸಿಬ್ಬಂದಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರ ಸೇವೆಗೆ ಲಭ್ಯವಾಗಲಿದ್ದಾರೆ.
ಜಂಟಿ ಕೃಷಿ ನಿರ್ದೇಶಕ ಕಚೇರಿಗಳ ಕೇಂದ್ರ ಸ್ಥಾನ:-
ಜಂಟಿ ಕೃಷಿ ನಿರ್ದೇಶಕರು ಬೆಂಗಳೂರು ನಗರ ಜಿಲ್ಲೆ ಕಚೇರಿಯನ್ನು ಹಾಲಿ ಇರುವ ಬನಶಂಕರಿಯೇ ಮುಂದುವರೆಸಿದ್ದು, ಜಂಟಿ ಕೃಷಿ ನಿರ್ದೇಶಕರು, ಬೆಂಗಳೂರು ಹುದ್ದೆಯನ್ನು ಜಂಟಿ ಕೃಷಿ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಎಂದು ಪುನರ್ ನಾಮಕರಣ ಮಾಡಲಾಗಿದೆ. ಇವರ ಕಚೇರಿಯನ್ನು ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಇಲ್ಲಿಗೆ ಸ್ಥಳಾಂತರ ಮಾಡಲು ನಿರ್ದೇಶನ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆಯ ಎಲ್ಲಾ ಕಚೇರಿಗಳ ಉಸ್ತುವಾರಿ ಈ ಜಂಟಿ ಕೃಷಿ ನಿರ್ದೇಶಕರ ವ್ಯಾಪ್ತಿಗೆ ಒಳಪಡಲಿದೆ.
ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ದೊಡ್ಡಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳು ಸೇರಿ ಒಂದೇ ಜಂಟಿ ಕೃಷಿ ನಿರ್ದೇಶಕರ ಹುದ್ದೆ ಇತ್ತು, ಈ ಕಚೇರಿ ಅಧೀನದಲ್ಲಿ 11 ರೈತ ಸಂಪರ್ಕ ಕೇಂದ್ರಗಳು (ಬೆಂಗಳೂರು ಉತ್ತರ 4+ ಆನೇಕಲ್-7) ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ರಾಮಕೃಷ್ಣ ಕೃಷಿ ಪಾಠಶಾಲೆ, ಪೀಡೆನಾಶಕ ಶೇಷಾಂಶ ಪ್ರಯೋಗಾಲಯ, ಮಣ್ಣು ಪರೀಕ್ಷಾ ಪ್ರಯೋಗಾಲಯಗಳು ಸಹ ಕಾರ್ಯ ನಿರ್ವಹಿಸುತ್ತಿವೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಪ್ರತ್ಯೇಕ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇರುವುದರಿಂದ, ಎರಡು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಭೆಗಳಲ್ಲಿ ಒಬ್ಬರೇ ಜಂಟಿ ಕೃಷಿ ನಿರ್ದೇಶಕರೇ ಭಾಗವಹಿಸಬೇಕಾಗಿತ್ತು.
ಇದರಿಂದಾಗಿ, ಎರಡು ಜಿಲ್ಲೆಗಳ ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ಕೈಗೊಂಡು ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಹೆಚ್ಚಿನ ಕಾರ್ಯ ಒತ್ತಡ ಉಂಟಾಗುತ್ತಿತ್ತು, ಇಲಾಖೆಯ ಸವಲತ್ತುಗಳನ್ನು ರೈತರಿಗೆ ತಲುಪಿಸುವಲ್ಲಿ ಕಷ್ಟಸಾಧ್ಯವಾಗುತ್ತಿತ್ತು. ಹೊಸ ಜಂಟಿ ಕೃಷಿ ನಿರ್ದೇಶಕರ ಹುದ್ದೆ ಸೃಜನೆಯಾದ ನಂತರ ಈ ಎಲ್ಲಾ ಸಮಸ್ಯೆಗಳು ಕೊನೆಯಾಗಿ ರೈತರಿಗೆ ಸಕಾಲದಲ್ಲಿ ಸೇವೆ ದೊರೆಯಲು ಅನುಕೂಲವಾಗಲಿದೆ.
ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಾರಂಭವಾಗಲಿದ್ದು, ಗ್ರಾಮಾಂತರ ಜಿಲ್ಲೆಯ ಜನರಿಗೆ ಇಲಾಖೆಯ ಸವಲತ್ತುಗಳು ಮತ್ತು ತಾಂತ್ರಿಕ ನೆರವು ಶೀಘ್ರವಾಗಿ ದೊರೆಯಲು ನೆರವಾಗುತ್ತದೆ. ಅಲ್ಲದೇ ರಾಜ್ಯಾದ್ಯಂತ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೀಘ್ರವಾಗಿ 956 ಕೃಷಿ ಅಧಿಕಾರಿಗಳ ಹುದ್ದೆಯನ್ನು ಕೆ.ಪಿ.ಎಸ್.ಸಿ ಮೂಲಕ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವರು ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ