ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಒಂದು ತಿಂಗಳ ಮಗುವಿಗೆ ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೇ ಮಗು ಸಾವನ್ನಪ್ಪಿದ್ದು, ನೊಂದ ತಂದೆ ತನಗೆ ನ್ಯಾಯ ಕೊಡಿಸುವಂತೆ ಸಿಎಂ ಯಡಿಯೂರಪ್ಪ ನಿವಾಸದ ಎದುರು ಪ್ರತಿಭಟನೆಗೆ ಕುಳಿತಿರುವ ಘಟನೆ ನಡೆದಿದೆ.
ಮಗುವಿನ ತಂದೆ ಮಂಜುನಾಥನಗರ ನಿವಾಸಿ ವೆಂಕಟೇಶ್ ಅವರು ಇಂದು ಮುಖ್ಯಮಂತ್ರಿಗಳ ಧವಳಗಿರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದು, ಕೊರೋನಾ ಸೋಂಕಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಜುಲೈ 11ರಂದು ವೆಂಕಟೇಶ್ ಅವರ 1 ತಿಂಗಳ ಹಸುಗೂಸು ಮೃತಪಟ್ಟಿತ್ತು. ಇದೀಗ ಸಿಎಂ ಯಡಿಯೂರಪ್ಪ ಮನೆ ಮುಂದೆ ನ್ಯಾಯ ಕೊಡಿಸಿ ಎಂದು ಮೃತ ಮಗುವಿನ ತಂದೆ ಮಗುವಿನ ಫೋಟೋ ಹಿಡಿದು ಕಣ್ಣೀರು ಹಾಕಿದ್ದಾರೆ.
ಆಸ್ಪತ್ರೆಗಳ ಬೇಜವಾಬ್ದಾರಿಯಿಂದ ನನ್ನ ಮಗು ಸಾವನ್ನಪ್ಪಿದೆ. ನನ್ನ ಮಗು ಸಾವನ್ನಪ್ಪಿ ನಾಲ್ಕು ದಿನಗಳಾಗಿದೆ. ಅಧಿಕಾರಿಗಳು ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಆದರೆ ನನ್ನ ಮಗುವಿನ ಸಾವಿಗೆ ನ್ಯಾಯ ಕೊಡಿಸುವವರು ಯಾರು? ನನ್ನ ಮಗುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಗಂಟೆಗೆ ಗಂಟೆಗೆ ಒಬ್ಬೊಬ್ಬರ ಪ್ರಾಣ ಹೋಗುತ್ತಿದೆ. ಇನ್ನಾದರೂ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವೊಲಿಸಿದರೂ ಧರಣಿ ಮುಂದುವರೆಸಿದ ವೆಂಕಟೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ