Latest

ಸೊಳ್ಳೆ ಮುಕ್ತ ಕಾರವಾರ

ಪ್ರಗತಿವಾಹಿನಿ ಸುದ್ದಿ, ಕಾರವಾರ -: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸೊಳ್ಳೆಗಳ ನಿಯಂತ್ರಣ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಾರವಾರದಲ್ಲಿ ಸೊಳ್ಳೆ ಮುಕ್ತ ಕಾರವಾರ ಎಂಬ ಯೋಜನೆ ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ ರೋಶನ್ ಅವರು ಹೇಳಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ನಗರದಲ್ಲಿ ಹೆಚ್ಚಿನ ಸಂಖ್ಯೆಯ ಮನೆಗಳ ಶೌಚಾಲಯದ ನೀರು ಮತ್ತು ತ್ಯಾಜ್ಯವು ಕಾಳಿ ನದಿ ಮತ್ತು ಕೊಣೆನಾಲಾ ಸೇರುವುದರಿಂದ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಬಾರದಂತಾಗಿದೆ. ಅನಧಿಕೃತವಾಗಿ ತ್ಯಾಜ್ಯವನ್ನು ನೀರಿಗೆ ಬಿಡುವಂತಹ ಮನೆಗಳಿಗೆ ನೋಟೀಸ್ ಜಾರಿ ಹಾಗೂ ಸಫ್ಟಿಕ್ ಟ್ಯಾಂಕ್‌ಗಳ ಪೈಪ್‌ಗಳಿಗೆ ಗಾಳಿಯಾಡುವ ಕವಚಗಳನ್ನು ಅಳವಡಿಸಿ, ಸ್ವಚ್ಛತೆಗೆ ಆದ್ಯತೆ ಕೊಟ್ಟು ಸೊಳ್ಳೆಗಳ ನಿಯಂತ್ರಣ ಮಾಡಲಾಗುವುದು. ಇದು ಯಶಸ್ವಿಯಾದಾಗ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಿ ಸೊಳ್ಳೆ ಮುಕ್ತ ಉತ್ತರಕನ್ನಡ ಮಾಡುವ ಕಾರ್ಯವು ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಗಬೇಕಿದೆ ಎಂದರು.
ಈ ಮುಂಬರುವ ಬಜೆಟ್ ವರ್ಷದಲ್ಲಿ ಉತ್ತರಕನ್ನಡ ಜಿಲ್ಲೆಯು ಕ್ರೀಡೆಗಳಿಗೆ ಒತ್ತು ನೀಡುವ ಯೋಜನೆಗಳನ್ನು ರೂಪಿಸುತ್ತಿದ್ದು, ಇದಕ್ಕಾಗಿ ೫೫ ಕ್ರೀಡಾಪಟುಗಳೊಂದಿಗೆ ಸಭೆ ನಡೆಸಿ, ಅವರಿಂದ ಸಲಹೆ-ಸೂಚನೆಗಳನ್ನು ಪಡೆದು ಜಿಲ್ಲೆಯಲ್ಲಿ ಕನಿಷ್ಠ ೧೨೦ ರ ವರೆಗೆ ಯುವ ಕ್ರೀಡಾಪಟುಗಳನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಕಾರ್ಯವನ್ನು ಜಿಲ್ಲಾ ಯುವಜನ ಮತ್ತು ಕ್ರಿಡಾ ಇಲಾಖೆಯು ಮಾಡಬೇಕೆಂದರು.

ಹಳಿಯಾಳದಲ್ಲಿ ಸಾಂಪ್ರದಾಯಿಕ ಕುಸ್ತಿ ಪಟುಗಳ ಗರಡಿಮನೆಗಳಿದ್ದು, ಅವುಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಬೇಕು. ಇದಕ್ಕಾಗಿ ಜಿಲ್ಲಾ ಪಂಚಾಯತದ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದರು.
ಗೋಕರ್ಣದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಉದ್ದೇಶಕ್ಕಾಗಿ ೨ ಹೆಕ್ಟೇರ್ ಭೂಮಿಯು ಅತ್ಯವಶ್ಯಕವಾಗಿದೆ. ಇದಕ್ಕೆ ಅರಣ್ಯ ಇಲಾಖೆಯು ಸಹಕಾರ ನೀಡಿದಾಗ, ಗೋಕರ್ಣದ ಪ್ರವಾಸೋದ್ಯಮವನ್ನು ಇನ್ನೂ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಬಹುದಾಗಿದೆ ಎಂದರು.

Home add -Advt

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೆರ್ ಅವರು ವಹಿಸಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್, ಸಾಮಾಜಿಕ ಭದ್ರತೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ್ ದೊಡ್ಮನಿ ಹಾಗೂ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷೆ ಉಷಾ ನಾಯ್ಕ್ ಸೇರಿದಂತೇ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Back to top button