Kannada NewsKarnataka NewsLatest

*ಕಾಂಗ್ರೆಸ್ ಸರ್ಕಾರದಲ್ಲಿ ದುಬಾರಿ ದುನಿಯಾ; ಎಲ್ಲ ಬೆಲೆಗಳ ಏರಿಕೆಯೇ ಸರ್ಕಾರದ 6ನೇ ಗ್ಯಾರೆಂಟಿ: ಮಾಜಿ ಸಿಎಂ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಕಾಂಗ್ರೆಸ್ ‌ಸರ್ಕಾರದ ದುಬಾರಿ ದುನಿಯಾ. ಈ ಸರ್ಕಾರಕ್ಕೆ ಜನ ಸಾಮಾನ್ಯರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ, ಹೊಟೆಲ್ ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, ಬಜೆಟ್ ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ, ಮೋಟರ್ ವೆಹಿಕಲ್ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಮೂಲಕ ಬರುವಂತ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದುನಿಯಾ ದುಬಾರಿಯಾಗಿದ್ದು ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.


ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದು, ರಾಜ್ಯದ ಅಭಿವೃದ್ಧಿಯ ಕತೆ ಅಯೋಮಯವಾಗಲಿದೆ.

Home add -Advt

ಎಸ್ಸಿಪಿ ಟಿಎಸ್ ಪಿ ಕಾಯ್ದೆಯಡಿ ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ದಿಗೆ ಮೀಸಲಿಟ್ಟ ಅನುದಾನದಲ್ಲಿ ಸುಮಾರು 11 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿದ್ದು, ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮಾರಕವಾಗಲಿದೆ. ರಾಜ್ಯ ಸರ್ಕಾರ ಎಸ್ಸಿಪಿ ಟಿಎಸ್ಪಿ ಯೋಜನೆಗೆ 34 ಸಾವಿರ ಕೋಟಿ ಬದಲು ಕೇವಲ 23 ಸಾವಿರ ಕೋಟಿ ರೂ.ಗೆ ಅನುಮೋದನೆ ನೀಡಿದಂತಾಗಿದ್ದು, ಇದು ಎಸ್ಸಿಪಿ ಕಾಯ್ದೆಯ ಉಲ್ಲಂಘನೆಯ ಜೊತೆಗೆ ಆ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ‌.

ಸಮಾಜ ಕಲ್ಯಾಣ ಸಚಿವ ಡಾ.‌ಎಚ್.‌ಸಿ. ಮಹದೇವಪ್ಪ ಅವರು ಮನಸಿಲ್ಲದೇ ಎಸ್ಸಿಪಿ ಟಿಎಸ್ಪಿ ಹಣ ವರ್ಗಾವಣೆಗೆ ಒಪ್ಪಿಕೊಂಡಿರುವುದಾಗಿ ಅಸಹಾಯಕತೆ ತೋರಿಸಿರುವುದು ಸರ್ಕಾರದ ನಡೆಯ ಬಗ್ಗೆ ಎಸ್ಸಿ ಎಸ್ಟಿ ಸಮುದಾಯಕ್ಕಿರುವ ಅಸಮಾಧಾನ ತೋರಿಸುತ್ತದೆ. ಇನ್ನೊಂದೆಡೆ ಎಸ್ಸಿ ಎಸ್ಟಿ ಸಮುದಾಯದ ಬಗ್ಗೆ ಕಾಂಗ್ರೆಸ್ ಗೆ ಇರುವ ನಿರ್ಲಕ್ಷ್ಯ ಧೋರೆಣೆ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button