ಚಿಗುಳೆ ಗ್ರಾಮದ ಬಳಿ ಕರಡಿ ದಾಳಿ: ರೈತ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಖಾನಾಪುರ; ತಾಲ್ಲೂಕಿನ ಕಣಕುಂಬಿ ಅರಣ್ಯದ ಚಿಗುಳೆ ಗ್ರಾಮದ ಬಳಿಕ ರೈತನೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಗುಳೆ ಗ್ರಾಮದ ವಿಲಾಸ ಚಿಖಲಕರ (48) ಕರಡಿ ದಾಳಿಗೊಳಗಾದ ರೈತ.
ಚಿಗುಳೆ ಗ್ರಾಮದಿಂದ ಮೂರು ಕಿಮೀ ದೂರದಲ್ಲಿರುವ ವಿಲಾಸ ಅವರ ತೋಟದಲ್ಲಿ ಅವರು ಗೋಡಂಬಿ ಗಿಡಗಳನ್ನು ಬೆಳೆಸಿದ್ದಾರೆ. ಅವರ ಜಮೀನಿನಲ್ಲಿ ಒಂದು ಚಿಕ್ಕ ಗುಡಿಸಲನ್ನು ನಿರ್ಮಿಸಿದ್ದಾರೆ. ಭಾನುವಾರ ಚಿಗುಳೆ ಸುತ್ತಮುತ್ತ ಮಳೆಯಾಗಿದ್ದರಿಂದ ವಿಲಾಸ ಅವರ ಜಮೀನಿನ ಗುಡಿಸಲಿನಲ್ಲಿ ಹೆಣ್ಣು ಕರಡಿಯೊಂದು ತನ್ನ ಎರಡು ಪುಟ್ಟ ಮರಿಗಳೊಂದಿಗೆ ಆಶ್ರಯ ಪಡೆದಿತ್ತು.
ಗುಡಿಸಲಿನಲ್ಲಿ ಕರಡಿಗಳಿದ್ದ ಬಗ್ಗೆ ಅರಿವು ಇಲ್ಲದ ವಿಲಾಸ ಸೋಮವಾರ ಮುಂಜಾನೆ ಗುಡಿಸಲ ಬಳಿ ತೆರಳಿದಾಗ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ವಿಲಾಸ ಅವರ ಬಾಯಿ, ದವಡೆ, ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿವೆ.
ಕರಡಿ ದಾಳಿಯಿಂದ ಗಾಯಗೊಂಡ ವಿಲಾಸ ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಲಾಸ ಅವರನ್ನು ಪರೀಕ್ಷಿಸಿದ ಜಿಲ್ಲಾಸ್ಪತ್ರೆಯ ವೈದ್ಯರು ಅವರ ದವಡೆಗೆ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಸೂಚಿಸಿದ್ದರಿಂದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾಹಿತಿ ನೀಡಿದ್ದಾರೆ