![](https://pragativahini.com/wp-content/uploads/2021/09/examba-anna.jpg)
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಹೆಮ್ಮಾರಿ ಕರೊನಾ ವೈರಸ್ ಆರ್ಭಟಕ್ಕೆ ಎಲ್ಲ ಕ್ಷೇತ್ರಗಳು ನಲುಗಿ ಹೋಗಿವೆ. ಆರ್ಥಿಕ ಸಂಕಷ್ಟದ ಸುಳಿಯಿಂದ ಹೊರಬರುವ ನಿಟ್ಟಿನಲ್ಲಿ ಪ್ರತಿಷ್ಠಿತ ಕಂಪನಿಗಳೂ ಸಹ ಸಿಬ್ಬಂದಿ ಹಾಗೂ ವೇತನ ಕಡಿತಗೊಳಿಸಲು ಮುಂದಾಗಿವೆ. ಆದರೆ, ಅಂತಾರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಯಕ್ಸಂಬಾ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಶೇ.44ರಷ್ಟು ವೇತನ ಹೆಚ್ಚಿಸುವ ಮೂಲಕ ಸಿಬ್ಬಂದಿ ಪರ ಕಾಳಜಿ ಮೆರೆದಿದೆ.
`ಎಂತಹ ಕಷ್ಟ ಬಂದರೂ ನಿಮ್ಮೊಂದಿಗೆ ನಾವಿದ್ದೇವೆ. ನೀವು ಇನ್ನಷ್ಟು ಉತ್ಸಾಹದಿಂದ ಸೇವೆ ಮುಂದುವರಿಸಿ. ಪ್ರಾಮಾಣಿಕವಾಗಿ ದುಡಿದು ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿ’ ಎಂದು ಉತ್ತೇಜನ ನೀಡುತ್ತಿದೆ.
ಅಭಿವೃದ್ಧಿಪಥದತ್ತ ಸೊಸೈಟಿ:
1991ರಲ್ಲಿ ಸ್ಥಾಪನೆಯಾದ ಸೊಸೈಟಿ ಅಭಿವೃದ್ಧಿ ಪಥದತ್ತ ಕಾಲಿಟ್ಟಿದೆ. ಕಳೆದ 3 ದಶಕಗಳಲ್ಲಿ ನಿರೀಕ್ಷೆಗೂ ಮೀರಿ ಬೆಳೆದುನಿಂತಿದೆ. ಕರ್ನಾಟಕದ 20 ಜಿಲ್ಲೆಗಳು ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರದಲ್ಲಿ ತನ್ನ ಶಾಖೆ ಹೊಂದಿದೆ. 153 ಶಾಖೆಗಳಲ್ಲಿ 1 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಂತೆ ಸಿಬ್ಬಂದಿ ಸಲಹುತ್ತಿರುವ ಸೊಸೈಟಿ ಆಡಳಿತ ಮಂಡಳಿ ಈಗ ವೇತನ ಪರಿಷ್ಕರಿಸಿ ಸಂತಸ ಮೂಡಿಸಿದೆ. ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಮನಗೆದ್ದಿರುವ ಸೊಸೈಟಿ, ಸಾವಿರಾರು ಜನರ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಕರೊನಾ ಸಂಕಷ್ಟ ಸಮಯದಲ್ಲಿ ಜನರ ಸಂಕಷ್ಟಕ್ಕೆ ಮಿಡಿದಿದೆ. ಯಾವುದೇ ಬ್ಯಾಂಕ್ ಗೂ ಕಮ್ಮಿ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ.
ಸಿಬ್ಬಂದಿಯೇ ಯಶಸ್ಸಿನ ಕಾರಣೀಕರ್ತರು:
ಕೋವಿಡ್-19 ಸಂಕಷ್ಟ ಕಾಲದಲ್ಲೂ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಟಿ ಲಿ., ಯಕ್ಸಂಬಾ, ಎಂದಿನಂತೆ ಅಭಿವೃದ್ಧಿ ಪಥದತ್ತಲೇ ಸಾಗಿದೆ. ಕಳೆದ 30 ವರ್ಷಗಳಿಂದ ಸಿಬ್ಬಂದಿ ದಣಿವರಿಯದೆ ದುಡಿಯುತ್ತಿದ್ದಾರೆ. ಸೊಸೈಟಿ ಇಷ್ಟೊಂದು ಎತ್ತರಕ್ಕೆ ಬೆಳೆದು ನಿಲ್ಲಲು ಕಾರಣೀಕರ್ತರೇ ಸಿಬ್ಬಂದಿ. ಇದರ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಹಾಗಾಗಿ ಸಿಬ್ಬಂದಿ ವೇತನ ಪರಿಷ್ಕರಿಸಲಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬೆಳೆಸುವುದೇ ನನ್ನ ಮುಂದಿನ ಗುರಿ ಎನ್ನುತ್ತಾರೆ ಚಿಕ್ಕೋಡಿ ಸಂಸದರೂ ಆಗಿರುವ ಸೊಸೈಟಿ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ.
ಎಷ್ಟು ವೇತನ ಹೆಚ್ಚಳ?:
ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಟಿ ಲಿ., ಯಕ್ಸಂಬಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಸಾವಿರಕ್ಕೂ ಅಧಿಕ ಸಿಬ್ಬಂದಿಗೂ ಇದು ಅನ್ವಯವಾಗಲಿದೆ. ಪ್ರಧಾನ ವ್ಯವಸ್ಥಾಪಕರಿಗೆ 25,600ರೂ., ಉಪ ಪ್ರಧಾನ ವ್ಯವಸ್ಥಾಪಕರಿಗೆ 17,600ರಿಂದ 21,700 ರೂ., ಸಹಾಯಕ ಪ್ರಧಾನ ವ್ಯವಸ್ಥಾಪಕರಿಗೆ 11,800 ರಿಂದ 14,900 ರೂ., ಹಿರಿಯ ಶಾಖಾ ವ್ಯವಸ್ಥಾಪಕರಿಗೆ 9,200 ರಿಂದ 14,000 ರೂ., ಕಿರಿಯ ಶಾಖಾ ವ್ಯವಸ್ಥಾಪಕರಿಗೆ 7,000ರಿಂದ 12,600ರೂ., ಹಿರಿಯ ಗುಮಾಸ್ತರಿಗೆ 5,700 ರಿಂದ 9,000ರೂ., ಕಿರಿಯ ಗುಮಾಸ್ತರಿಗೆ 5,000 ರಿಂದ 8,200 ರೂ., ಹಿರಿಯ ಸಿಪಾಯಿಗೆ 4,500 ರಿಂದ 7,400 ರೂ., ಕಿರಿಯ ಸಿಪಾಯಿಗೆ 3,800 ರಿಂದ 4,600 ರೂ., 3 ವರ್ಷದೊಳಗೆ ಸೇವಾನುಭವ ಹೊಂದಿದ ಸಿಪಾಯಿಗೆ 1,200 ರಿಂದ 1,600ರೂ. ಹಾಗೂ ಗುಮಾಸ್ತರಿಗೆ 1,400 ರಿಂದ 1,900 ರೂ. ವೇತನ ಹೆಚ್ಚಿಸಲಾಗಿದೆ. ಸೊಸಾಯಟಿ ಆಡಳಿತ ಮಂಡಳಿ ನಿರ್ಧಾರದಿಂದ ಹರ್ಷಗೊಂಡಿರುವ ಸಿಬ್ಬಂದಿ, ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.
ಬೆಳಗಾವಿ ವಲಯ ಜಂಟಿ ನಿರ್ದೇಶಕರಾಗಿ ಕವಿ ಬಸವರಾಜ ಹೂಗಾರ ಅಧಿಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ