
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಬಿಡುಗಡೆಯಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾದ ಪರಿಣಾಮ ಅಥಣಿಯ ಹುಲಗಬಾಳ ಗ್ರಾಮದ 40 ಕುಟುಂಬಗಳ ಜೊತೆಗೆ ತುಂಬು ಗರ್ಭಿಣಿ, ಹಲವು ರೋಗಿಗಳು ನಡುಗಡ್ಡೆಯಲ್ಲಿ ಸಿಲುಕಿ ಅಧಿಕಾರಿಗಳ ವಿರುದ್ದ ನೆರೆ ಸಂತ್ರಸ್ತರು ಅಕ್ರೋಶ ಹೊರಹಾಕುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ 40 ಕುಟುಂಬಗಳು ಸರಿಸುಮಾರು ನೂರಕ್ಕೂ ಹೆಚ್ಚು ಜನರು ಹಾಗೂ ಜಾನುವಾರುಗಳು ನಡುಗಡ್ಡೆಯಲ್ಲಿ ಸಿಲುಕಿ ಜೀವಭಯದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಕುಟುಂಬಗಳಲ್ಲಿ ತುಂಬು ಗರ್ಭಿಣಿ ಹಾಗೂ ಪಾರ್ಶ್ವವಾಯುಪೀಡಿತ ರೋಗಿಗಳು ಕೂಡ ವಾಸಿಸಿದ್ದು, ನಡುಗಡ್ಡೆಯಲ್ಲಿ ಸಿಲುಕಿದ ನೆರೆ ಸಂತ್ರಸ್ತರಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರ ಶಾಶ್ವತ ಪರಿಹಾರ ನೀಡಿಲ್ಲ ಅಂತಾ ನೆರೆ ಸಂತ್ರಸ್ತರು ಆರೋಪ ಮಾಡಿದ್ದು ಹತ್ತಾರು ವರ್ಷದಿಂದ ನೆರೆ ಬಂದಾಗ ನಮ್ಮ ಗೋಳು ಕೇಳೋರೇ ಇಲ್ಲ ಎಂದು ಸಂತ್ರಸ್ತರು ಆಕ್ರೋಶ ಹಾಕಿದ್ದಾರೆ.