ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಇರುವ ‘ಬಿ’ ಖಾತೆಗಳನ್ನು ಸಕ್ರಮಗೊಳಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ ಅವರು ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲೊಂದು ದೂರು ದಾಖಲಾಗಿದೆ. ಈ ದೂರು ದಾಖಲಾಗಿದ್ದರಿಂದ ಅಕ್ರಮ-ಸಕ್ರಮ ಸಂಪೂರ್ಣ ಸ್ಥಗಿತವಾಗಿದೆ. ಅದನ್ನು ಇತ್ಯರ್ಥಗೊಳಿಸುವಲ್ಲಿ ರಾಜ್ಯ ಸರಕಾರ ತುಂಬಾ ಗಂಭೀರ ಪ್ರಯತ್ನ ನಡೆಸಿದೆ ಮತ್ತು ದೂರುದಾರರ ಬೇಡಿಕೆಗಳನ್ನು ಆಲಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಬೆಂಗಳೂರು ದಿನೇದಿನೇ ಬೆಳೆಯುತ್ತಿದ್ದು,ಜನದಟ್ಟಣೆ ಹೆಚ್ಚಾಗ್ತಾ ಇದೆ ಮತ್ತು 110 ಹಳ್ಳಿಗಳನ್ನು ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಂಡಿದ್ದೇವೆ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ 8 ಮುನ್ಸಿಪಾಲಿಟಿಗಳನ್ನು ಸೇರಿಸಿಕೊಳ್ಳಲಾಗಿತ್ತು. ನಗರ ಪ್ರದೇಶದ ಜೊತೆಗೆ ಹಳ್ಳಿಗಳಲ್ಲಿಯೂ ಮೂಲಸೌಕರ್ಯ ಕಲ್ಪಿಸುವ ಸವಾಲು ಇದೆ;ಅಲ್ಲಿಯೂ ಸೌಕರ್ಯ ಒದಗಿಸಲಾಗುವುದು ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 18,52,802 ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿವಿಧ ರೀತಿಯ ಉಪಯೋಗದ ಕಟ್ಟಡಗಳನ್ನ ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದ್ದು,ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ದರಗಳಲ್ಲಿ ಆಸ್ತಿ ತೆರಿಗೆ ನಿಗದಿಪಡಿಸಲಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಯೂನಿಟ್ ಏರಿಯಾ ವ್ಯಾಲ್ಯೂ ಮೌಲ್ಯದ ಶೇ.25ರಷ್ಟು ತೆರಿಗೆ ಹಾಗೂ ವಸತಿ ಕಟ್ಟಡಗಳಿಗೆ ಶೇ.20ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
13.56ಲಕ್ಷ ಸ್ವತ್ತುಗಳಿಗೆ ಆಸ್ತಿ ತೆರಿಗೆ ಘೋಷಣೆ: 2021-22ನೇ ಸಾಲಿನಲ್ಲಿಈವರೆಗೂ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ದತಿ ಅಡಿಯಲ್ಲಿ ಒಟ್ಟು 13,56,087 ಸ್ವತ್ತುಗಳಿಗೆ ಆಸ್ತಿ ತೆರಿಗೆ ಘೋಷಿಸಿಕೊಂಡು ಆಸ್ತಿತೆರಿಗೆ ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವರಿಸಿದರು.
ಇದರಲ್ಲಿ 97,057 ವಾಣಿಜ್ಯ ಕಟ್ಟಡಗಳು,9112 ಬಹುಮಹಡಿ ವಸತಿ ಸಂಕೀರ್ಣಗಳು ಮತ್ತು 12,59,030 ವಸತಿಯೋಗ್ಯ ಮನೆಗಳಿವೆ ಎಂದು ಅವರು ತಿಳಿಸಿದರು.
ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ಘೋಷಿಸಿಕೊಂಡಿರುವ 10516 ಕಟ್ಟಡಗಳಿಗೆ ಆಸ್ತಿತೆರಿಗೆ ಪುನರ್ ಪರಿಷ್ಕರಿಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಈ ಪ್ರಕರಣಗಳಲ್ಲಿ 56.14ಕೋಟಿ ರೂ. ಆಸ್ತಿ ತೆರಿಗೆ ವಸೂಲು ಮಾಡಲಾಗಿದೆ ಎಂದರು.
ಕಾರಂಜಾ ಡ್ಯಾಂ ಉದ್ಯಾನವನ ನಿರ್ಮಾಣ ಪರಿಶೀಲನಾ ಹಂತದಲ್ಲಿ: ಸಚಿವ ಕಾರಜೋಳ
ಕಾರಂಜಾ ಅಣೆಕಟ್ಟಿನ ಕೆಳಗಡೆ ಇರುವ ಜಾಗದಲ್ಲಿ 30.68 ಕೋಟಿ ರೂ.ವೆಚ್ಚದಲ್ಲಿ ಉನ್ನತ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಮೊತ್ತದ ಪ್ರಸ್ತಾವನೆಯು ಕರ್ನಾಟಕ ನೀರಾವರಿ ನಿಗಮದ ಪರಿಶೀಲನಾ ಹಂತದಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಅರವಿಂದ ಕುಮಾರ್ ಅರಳಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಕಾರಂಜಾ ಅಣೆಕಟ್ಟಿನ ಭದ್ರತೆಗೊಸ್ಕರ ಕಾರಂಜಾ ಅಣೆಕಟ್ಟಿನ ಆವರಣದಲ್ಲಿನ ಚಲನವಲನ/ಚಟುವಟಿಕೆಗಳನ್ನು ಅರಿಯಲು ಮತ್ತು ಆವರಣದಲ್ಲಿ ಖಾಲಿ ಇದ್ದ ಉದ್ಯಾನವನ ಮತ್ತು ಅಣೆಕಟ್ಟಿನ ಒಡ್ಡಿನ ಪ್ರದೇಶವನ್ನು ಬೆಳಗಿಸಲು ಏರಿಯಾ ಉದ್ದಕ್ಕೂ ಎಲ್‍ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಮತ್ತು ಚಲನವಲನಗಳ ಮೇಲೆ ನಿಗಾಇಡಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡ್ಯಾಂನ ಪೊಲೀಸ್ ಭದ್ರತೆಗಾಗಿ ಈಗಾಗಲೇ ಪೊಲೀಸ್ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.
1200 ಕೋಟಿ ರೂ.ವೆಚ್ಚದಲ್ಲಿ 128 ಕಿ.ಮೀ ಕಿರುಕಾಲುವೆಗಳ ವಿಸ್ತಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1200 ಕೋಟಿ ರೂ.ವೆಚ್ಚದಲ್ಲಿ 128ಕಿ.ಮೀ ಕಿರುಕಾಲುವೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು,ಇದೇ ವರ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಷತ್‍ನಲ್ಲಿ ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಸದಸ್ಯ ಪಿ.ಆರ್.ರಮೇಶ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜಕಾಲುವೆಗಳ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಕಿರುಕಾಲುವೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಸ್ತøತ ಯೋಜನಾ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ದೊಡ್ಡಮಟ್ಟದಲ್ಲಿ ಮಳೆಯಾದ್ರೂ ಸಹ ಹೊರಗಡೆ ನೀರು ಹರಿದುಹೋಗದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ರಾಜಕಾಲುವೆಗಳು ಮತ್ತು ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಅನೇಕ ಕಡೆ ಬಹಳಷ್ಟು ಪ್ರಭಾವಿಗಳು ದಾಖಲೆಗಳನ್ನು ಬದಲಾವಣೆ ಮಾಡಿ ಮಾರಾಟ ಮಾಡಿಬಿಟ್ಟಿದ್ದಾರೆ ಎಂದು ಸಿಎಂ ಅವರು ತಿಳಿಸಿದರು.
ದೊಡ್ಡಮಟ್ಟದಲ್ಲಿ ಬೆಳೆಯುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯವಿಲೇವಾರಿಯಂತೆ ರಾಜಕಾಲುವೆ ನಿರ್ಮಾಣ ಮತ್ತು ನಿರ್ವಹಣೆಯ ಸವಾಲು ಸಹ ನಮ್ಮ ಮುಂದಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು ಪ್ರಥಮ ಹಂತದ ಕಾಲುವೆಗಳು-348.325ಕಿ.ಮೀ ಮತ್ತು ದ್ವಿತೀಯ ಕಾಲುವೆಗಳು-493.44 ಕಿ.ಮೀ ಸೇರಿದಂತೆ ಒಟ್ಟು 842ಕಿ.ಮೀ ಗುರುತಿಸಲಾಗಿದೆ. ಅದರಲ್ಲಿ 428 ಕಿ.ಮೀ ಕಾಲುವೆ ಪೂರ್ಣಗೊಂಡಿದ್ದು,413.77ಕಿ.ಮೀ ಕಾಲುವೆ ನಿರ್ಮಾಣ ಬಾಕಿ ಇದ್ದು;ಇದಕ್ಕೆ 4670.42 ಕೋಟಿ ರೂ.ಅನುದಾನ ಬೇಕಾಗಿದೆ ಎಂದರು.
1912 ಪ್ರಕರಣಗಳ ಒತ್ತುವರಿ ತೆರವು; 98 ಮಾಲೀಕರು ಹಾಗೂ 20 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿಯಾಗಿರುವುದು ಸರಕಾರದ ಗಮನಕ್ಕೆ ಬಂದಿದ್ದು,ಅದನ್ನು ಯಾವುದೇ ರೀತಿಯ ಬೇಧ-ಭಾವ ಮಾಡದೇ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಷತ್‍ನಲ್ಲಿ ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಸದಸ್ಯ ಯು.ಬಿ.ವೆಂಕಟೇಶ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ 2626 ಒತ್ತುವರಿ ಪ್ರಕರಣಗಳಿದ್ದು,382 ಎಕರೆ 27 ಗುಂಟೆ ಇರುತ್ತದೆ. 2020 ಡಿ.24ಕ್ಕೆ ಅನ್ವಯವಾಗುವಂತೆ 1912 ಪ್ರಕರಣಗಳ ಒತ್ತುವರಿ ತೆರವುಗೊಳಿಸಲಾಗಿರುತ್ತದೆ. ಉಳಿದ 714 ರಾಜಕಾಲುವೆ ಒತ್ತುವರಿಗಳನ್ನು ಸಂಬಂಧಪಟ್ಟ ಭೂಮಾಪಕರಿಂದ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು,ಒತ್ತುವರಿಗಳನ್ನು ಹಂತಹಂತವಾಗಿ ತೆರವುಗೊಳಿಸುವ ಬಗ್ಗೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ರಾಜಕಾಲುವೆ ಒತ್ತುವರಿ ಮಾಡಿದ 98 ಮಾಲೀಕರ ವಿರುದ್ಧ ಕರ್ನಾಟಕ ರಾಜ್ಯ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಮತ್ತು ಒತ್ತುವರಿಗೆ ಸಂಬಂಧಿಸಿದಂತೆ 20 ಅಧಿಕಾರಿಗಳ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ರಸ್ತೆ ನಿರ್ಮಿಸುವುದಕ್ಕಿಂತ ಮುಂಚೆ ಟಾಸ್ಕ್ ಫೋರ್ಸ್‍ನಿಂದ ಪರಿಶೀಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ರಸ್ತೆ ನಿರ್ಮಿಸುವುದಕ್ಕಿಂತ ಮುಂಚಿತವಾಗಿ ರಸ್ತೆ ನಿರ್ಮಿಸುವುದಕ್ಕೆ ಸಂಬಂಧಿಸಿದ ಸಾಧಕ-ಬಾಧಕಗಳ ಕುರಿತು ನೇಮಿಸಲಾದ ಟಾಸ್ಕ್‍ಫೋರ್ಸ್ ಪರಿಶೀಲನೆ ನಡೆಸಲಿದೆ ಮತ್ತು ಅದರ ವರದಿ ಆಧರಿಸಿ ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಪರಿಷತ್‍ನಲ್ಲಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕಾಏಕಿ ರಸ್ತೆ ನಿರ್ಮಿಸುವುದಕ್ಕೆ ಮತ್ತು ಅನುದಾನ ಬಿಡುಗಡೆ ಮಾಡುವುದಕ್ಕೆ ಮುಂದಾಗುವುದರ ಬದಲು ಎಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆಯೋ ಅಲ್ಲಿ ಉದ್ಭವಿಸಬಹುದಾದ ಭೂಸ್ವಾಧೀನ ಸಮಸ್ಯೆಗಳು,ಸಂಚಾರ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಇನ್ನೀತರ ಅಂಶಗಳ ಕುರಿತು ನೇಮಿಸಲಾದ ಸಮಿತಿ ಪರಿಶೀಲನೆ ನಡೆಸಿ ಕ್ರಿಯಾಯೋಜನೆ ಸಿದ್ದಪಡಿಸಿ ವರದಿ ನೀಡಲಿದೆ. ಅದರ ವರದಿ ಆಧರಿಸಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ರಸ್ತೆ ನಿರ್ಮಿಸುವುದು ಅಂದ್ರೇ ಬರೀ ರಸ್ತೆಯಷ್ಟೇ ಅಲ್ಲ ಅದಲ್ಲಿ ಗ್ಯಾಸ್, ನೀರು, ಕೇಬಲ್, ವಿದ್ಯುತ್, ಮೂಲಸೌಕರ್ಯಗಳು ಬರುತ್ತವೆ. ಇದು ಎಂಜನಿಯರ್‍ಗಳಿಗೆ ಬಹುದೊಡ್ಡ ಟಾಸ್ಕ್ ಎಂದು ಅವರು ಅಭಿಪ್ರಾಯಪಟ್ಟರು.
ಒಂದು ಕಾಮಗಾರಿ ಪ್ರಾರಂಭದಿಂದಿಡಿದು ಅದು ಮುಗಿಯುವವರೆಗೆ ಎಲ್ಲ ಹಂತಗಳಲ್ಲಿ ಗುಣಮಟ್ಟದ ಪರಿಶೀಲನೆಯನ್ನು ನಡೆಸಲಾಗುತ್ತಿದೆ ಮತ್ತು 3ನೇ ವ್ಯಕ್ತಿಗಳಿಂದಲೂ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದರು.
ಕಿತ್ತೂರು ಅರಮನೆ ಮಾದರಿ ನಿರ್ಮಾಣಕ್ಕೆ CM ಅನುಮೋದನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ