*ಬೆಳಗಾವಿಯಲ್ಲಿ ಅಪೂರ್ವ ಯಶಸ್ಸು ಕಂಡ ತಾಳಮದ್ದಳೆ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ಜರುಗಿದ ತಾಳಮದ್ದಳೆ ಕಾರ್ಯಕ್ರಮ ಅಪೂರ್ವ ಯಶಸ್ಸನ್ನು ಕಂಡಿತು.
ಆಯೋಜಕರ ನಿರಿಕ್ಷೆ ಮೀರಿ ಯಶಸ್ಸು ಕಂಡ ಕಾರ್ಯಕ್ರಮ. ಪ್ರಬುದ್ಧ ಪ್ರೇಕ್ಷಕವರ್ಗದವರಿಂದ ತುಂಬಿದ ಸಭಾಗೃಹದಲ್ಲಿ ಎರಡು ತಾಸು ನಡೆದ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮ ಎಲ್ಲರಿಂದಲೂ ಅಪಾರ ಪ್ರಶಂಸೆ ಪಡೆದುಕೊಂಡಿತು.
ಬೆಳಗಾವಿ ಭಾಗದಲ್ಲೇ ಅಪರೂಪವೆನಿಸಿರುವ ತಾಳಮದ್ದಳೆಯ ಹೊಸ ಅನುಭವವನ್ನು ಪಡೆದ ಶ್ರೋತೃಗಳಿಗೆ ನಿಜವಾಗಿಯೂ ಒಂದು ಹೊಸ ಅನುಭವವನ್ನು ಕೊಟ್ಟಿತು. ತಾಳಮದ್ದಳೆ ಕಲಾವಿದರದ್ದು ವಿಶೇಷ ಪರಿಶ್ರಮ ಎಂದು ಹೇಳಲೇಬೇಕು.
ಎರಡು ತಾಸಿಗೂ ಅಧಿಕ ಕಾರ್ಯಕ್ರಮದಲ್ಲಿ ಕಲಾವಿದರು ಯಾರೂ ಪುಸ್ತಕವನ್ನು ನೋಡಲೇ ಇಲ್ಲ ಎಲ್ಲವೂ ಬಾಯಿ ಪಾಠವಾಗಿತು. ಬೆಂಗಳೂರಿನ ಸಪ್ತಕ ಸಂಗೀತ ಸಂಸ್ಥೆಯ ಸಹಕಾರದೊಡನೆ ಈ ಕಾರ್ಯಕ್ರಮ ಸಂಘಟಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಸಪ್ತಕದ ರೂವಾರಿ ಜಿ. ಎಸ್. ಹೆಗಡೆ ಅವರಿಗೆ ಎಪ್ಪತ್ತೈದರ ಅಮೃತ ಸನ್ಮಾನದ ಗೌರವ ನೀಡಲಾಯಿತು.
ಹಿರಿಯ ಪತ್ರಕರ್ತರು ಸಾಹಿತಿಯು ಆದ ಎಲ್ಎಸ್ .ಶಾಸ್ತ್ರಿ, ರಂಗಸಂಪದದ ಡಾ. ಅರವಿಂದ ಕುಲಕರ್ಣಿ, ರಂಗ ಸೃಷ್ಟಿಯ ರಮೇಶ ಜಂಗಲ್, ಕಲಾರಂಗದ ರವಿ ಕೊಟಾರಗಸ್ತಿ, ಸಪ್ತಸ್ವರದ ನಿರ್ಮಲಾ ಪ್ರಕಾಶ ಇವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ಸುಬ್ರಹ್ಮಣ್ಯ ಭಟ್ಟ, ಮುರುಗೇಶ ಶಿವಪೂಜಿ, ಶಿರೀಷ ಜೋಶಿ, ಪ್ರಭಾಕರ ಶಹಾಪುರಕರ, ಭಾರತಿ ಭಟ್ , ಚಂದ್ರಶೇಖರ ನವಲಗುಂದ, ಆನಂದ ಪುರಾಣಿಕ, ಸತ್ಯನಾರಾಯಣ ಇವರೆಲ್ಲರೂ ಸೇರಿ ಜಿ. ಎಸ್. ಹೆಗಡೆಯವರ ಸನ್ಮಾನಕ್ಕೆ ಕೈಜೋಡಿಸಿದರು.
ನಂತರ ನಡೆದ ತಾಳಮದ್ದಳೆಯಲ್ಲಿ ಹಿರಿಯ ಭಾಗವತರಾದ ಗೋಪಾಲಕೃಷ್ಣ ಜೋಗಿಮನೆಯವರು, ಅರ್ಥಧಾರಿಗಳಾ ಶಿವರಾಮ ಗಾಂವಕರ( ಕೃಷ್ಣ) , ನಾರಾಯಣ ಯಾಜಿ ಸಾಲೇಬೈಲು ( ಕೌರವ), ದಿವಾಕರ ಹೆಗಡೆ ( ವಿದುರ) ಹಾಗೂ ಮದ್ದಳೆಯಲ್ಲಿ ಕುಮಾರ ಮಯೂರ ಹೆಗಡೆ ಹರಿಕೇರಿ ಇವರು ಬಹಳ ಸೊಗಸಾಗಿ ಕೃಷ್ಣ ಸಂಧಾನ ಕಥಾಭಾಗವನ್ನು ಪ್ರಸ್ತುತಪಡಿಸಿದರು.
ಕಲಾರಸಿಕರು ಮಂತ್ರಮುಗ್ಧರಾಗಿ ೧೫೦ ನಿಮಿಷಗಳ ಕಾಲ ತಾಳಮದ್ದಳೆಯ ರುಚಿ ಸವಿದರು. ಜೋಗಿಮನೆಯವರ ಮಧುರ ಕಂಠದ ಶುದ್ಧ ಯಕ್ಷಗಾನೀಯ ಶೈಲಿಯ ಭಾವಪೂರ್ಣ ಭಾಗವತಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರ ಮಯೂರನ ಮದ್ದಳೆ ಕೈಚಳಕ, ಮೂವರೂ ಅರ್ಥಧಾರಿಗಳ ಪ್ರಬುದ್ಧ ಮಾತುಗಾರಿಕೆ ಅಭೂತಪೂರ್ವ ಯಶಸ್ಸಿಗೆ ಕಾರಣವಾಯಿತು.
ಕಾರ್ಯಕ್ರಮದ ನಂತರ ಪ್ರತಿಯೊಬ್ಬರೂ ಕಲಾವಿದರನ್ನು ಅಭಿನಂದಿಸಿದ್ದು , ಮತ್ತೆ ಇಂತಹ ಕಾರ್ಯಕ್ರಮ ಆಗಬೇಕೆಂದು ಜನ ಅಪೇಕ್ಷಿಸಿದ್ದು ಸಂಘಟಕರಾದ ನಮಗೆ ಖುಷಿಯ ಸಂಗತಿ. ಎಲ್ಲ ಕಲಾವಿದರಿಗೂ, ನಮ್ಮೊಡನೆ ಸಹಕರಿಸಿದ ಸಂಸ್ಕಾರ ಭಾರತಿ, ರಂಗಸಂಪದ, ರಂಗಸೃಷ್ಟಿ, ಕಲಾರಂಗ, ಸಪ್ತಸ್ವರ, ವಾಗ್ದೇವಿ ಗಮಕ ಸಂಸ್ಥೆ, ನಾದಸುಧಾ ಸಂಸ್ಥೆ, ಸಂಗೀತ ಕಲಾಕಾರ ಸಂಘ ಕರ್ನಾಟಕ ಪತ್ರಕರ್ತರ ಸಂಘ, ನಿವೇದಾರ್ಪಣ ಅಕಾಡೆಮಿ, ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್ ಮೊದಲಾದ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್.ಎಸ್. ಶಾಸ್ತ್ರಿ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.


