ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರ್ಕಾರದ ವಿವಿಧ ನಿಗಮಗಳಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಜೀವನ ಮಟ್ಟ ಸುಧಾರಣೆಗೆ ಹಲವು ಸ್ವಾವಲಂಬಿ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಧನ ಸಹಿತ ಸಾಲ ನೀಡುವ ಕಾರ್ಯಕ್ರಮಗಳಿವೆ. ಬಹಳಷ್ಟು ಜನರಿಗೆ ಬ್ಯಾಂಕ್‌ಗಳಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ದೊರಕುವುದಿಲ್ಲ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ ದುರ್ಬಲ ವರ್ಗದವರಿಗೆ ತ್ವರಿತವಾಗಿ ನೆರವು ಒದಗಿಸಲು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಸೆ.16) ನಡೆದ, ಜಿಲ್ಲಾ ಮಟ್ಟದ ಸಮೀಕ್ಷೆ ಸಮಿತಿ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ನಿಗಮಗಳು ಹಾಗೂ ಇಲಾಖೆಗಳಿಂದ ಜನರಿಗೆ ಸುಲಭವಾಗಿ ಯೋಜನೆಗಳು ದೊರೆಯುವಂತೆ ಸರ್ಕಾರದಿಂದ 75 ರಿಂದ 90% ಸಬ್ಸಿಡಿ ನೀಡಲಾಗುತ್ತಿದೆ. ಬ್ಯಾಂಕ್ ಗಳು ಇದಕ್ಕೆ ಪೂರಕವಾಗಿ ಸಹಕಾರ ನೀಡಬೇಕು ಬಾಕಿ ಅರ್ಜಿಗಳನ್ನು ಪರಿಶೀಲಿಸಿ ತಕ್ಷಣ ಸಾಲ ಮಂಜೂರು ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರೈತರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್ ಗಳು ಹಿಂದೇಟು ಹಾಕುತ್ತಿವೆ. ಈ ರೀತಿಯಲ್ಲಿ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದು ಬ್ಯಾಂಕ್ ಗಳ ಬೆಳವಣಿಗೆ ಅಲ್ಲ. ಜನರಿಗೆ ಉತ್ತಮ ಸೇವೆ ಒದಗಿಸುವಂತೆ ಬ್ಯಾಂಕ್ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಬ್ಯಾಂಕ್ ಸಂಬಂಧಿಸಿದ ಸಭೆಗಳಲ್ಲಿ ಯಾವುದೇ ಪ್ರಗತಿ ವರದಿ ಕಾಣುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಕಾರ್ಯ ನಿರ್ವಹಿಸಬೇಕು. ಯಾವುದೇ ಅರ್ಜಿಗಳನ್ನು ತಡೆ ಹಿಡಿಯದೆ ೧೫ ದಿನಗಳ ಒಳಗಾಗಿ ತಕ್ಷಣ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ರೈತಾಪಿ ವರ್ಗದ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ:
ಸರ್ಕಾರಿ ಯೋಜನೆಗಳ ಮೂಲಕ ಸಾಲ ಪಡೆಯಲು ಬಂದ ಅರ್ಜಿದಾರರ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ, ಬ್ಯಾಂಕ್ ನಿಯಮಾವಳಿಯ ಅನ್ವಯ ಇತರೆ ಮಾರ್ಗದ ಮೂಲಕ ಸಾಲ ಮಂಜೂರು ಮಾಡಬೇಕು. ರೈತಾಪಿ ವರ್ಗದ ಜನರ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಬಾಕಿ ಇರದಂತೆ ನೋಡಿಕೊಂಡು ಅರ್ಹ ಫಲಾನುಭವಿಗಳಿಗೆ ಸಾಲ ಒದಗಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈಗಾಗಲೇ ಸಾಲ ಪಡೆದು ಮರು ಪಾವತಿ ಮಾಡಿದ ಅರ್ಜಿದಾರರು ಮತ್ತಿತರ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೆ, ಅಂತಹ ಅರ್ಜಿಗಳನ್ನು ತಕ್ಷಣ ಪರಿಶೀಲಿಸಿ ಸಾಲ ಮಂಜೂರಾತಿಗೆ ಕ್ರಮ ವಹಿಸಬೇಕು. ಆಧಾರ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಜೋಡಣೆ ಕಡ್ಡಾಯವಾಗಿ ಇರುವಂತೆ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಸಾಧನೆಗೆ ಸೂಚನೆ:
ಸರಕಾರಿ ಯೋಜನೆಗಳ ಗುರಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗುತ್ತಿಲ್ಲ. ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯಗಳು ಸಮರ್ಪಕ ಬಳಕೆ ಆಗುವಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಅಭಿವೃದ್ದಿ ನಿಗಮಗಳ ಹಾಗೂ ಸಂಭAದಿಸಿದ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ವಿವಿಧ ಸಾಲ ಸೌಲಭ್ಯಗಳ ಬಾಕಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಯೂನಿಯನ್ ಬ್ಯಾಂಕ್ ನಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ಸಂಬAಧಪಟ್ಟ ಬ್ಯಾಂಕ್ ಅಧಿಕಾರಿಗಳು ಈ ಕುರಿತು ಯಾಕೆ ಗಮನ ಹರಿಸುತ್ತಿಲ್ಲ. ಕೇವಲ ಠೇವಣಿ ಹಾಗೂ ಇನ್ನಿತರ ಭದ್ರತಾ ಸಾಲ ನೀಡುವುದು ಮಾತ್ರ ಬ್ಯಾಂಕ್ ಕೆಲಸ ಅಲ್ಲ. ಅರ್ಹರಿಗೆ ಸಾಲ ಸೌಲಭ್ಯ ನೀಡುವುದು ಬ್ಯಾಂಕ್ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬ್ಯಾಂಕ್ ಗಳಲ್ಲಿ ಓಟಿಎಸ್ ಮಾಹಿತಿ ಫಲಕ ಅಳವಡಿಕೆ:
ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿ ಓಟಿಎಸ್ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಸರಳವಾಗಿ ಮಾಹಿತಿ ಸಿಗಲಿದೆ. ಸಾಲ ಅವಶ್ಯವಿರುವ ಸ್ಥಳೀಯ ಭಾಗದ ರೈತರ ಅರ್ಜಿಗಳ ಪರಿಶೀಲಿಸಿ ಅಂತವರಿಗೆ ತಕ್ಷಣ ಸಾಲ ಮಂಜೂರು ಮಾಡಬೇಕು ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಈಗಾಗಲೇ ಸರ್ಕಾರದ ಯೋಜನೆಗಳ ಗುರಿಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಬ್ಯಾಂಕ್ ಗಳು ಕೆಲಸ ಮಾಡಬೇಕು.
ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳು ಸ್ವಯಂ ಪ್ರೇರಿತವಾಗಿ ಶಾಲಾ ಕೊಠಡಿ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ ಕೊಡಲು ಮುಂದೆ ಬರಬೇಕು.
ಈಗಾಗಲೇ ಕೆಲವು ಬ್ಯಾಂಕ್ ಗಳು ಈ ಕೊಡುಗೆ ನೀಡಿವೆಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್.ವಿ ಅವರು ತಿಳಿಸಿದರು.
ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಮತ್ತೆ ಮೂವರ ಬಂಧನ; 20 ಕ್ಕೆ ಏರಿದ ಬಂಧಿತರ ಸಂಖ್ಯೆ
https://pragati.taskdun.com/belgaum-news/kptcl-exam-scam-three-more-accused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ