Belagavi NewsBelgaum News

*ನಾಳೆ ಬೈಕ್‌ ರ್‍ಯಾಲಿ, ಮೇ 4ರಂದು ಮೆರವಣಿಗೆ*

ಪ್ರಗತಿವಾಹಿನಿ ಸುದ್ದಿ: ‘ಜಾಗತಿಕ ಲಿಂಗಾಯತ ಮಹಾಸಭೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ದಳ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಈ ಸಲ ಸಡಗರದಿಂದ ಬಸವ ಜಯಂತಿ ಆಚರಿಸಲು ತೀರ್ಮಾನಿಸಿದ್ದೇವೆ. ಇದರ ಪ್ರಯುಕ್ತ, ಬೃಹತ್‌ ಬೈಕ್‌ ರ್‍ಯಾಲಿ, ಮೆರವಣಿಗೆ ಹಮ್ಮಿಕೊಂಡಿದ್ದೇವೆ’ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಪ್ರಿಲ್‌ 27ರಂದು ಬೆಳಿಗ್ಗೆ 8ಕ್ಕೆ ಬಸವೇಶ್ವರ ವೃತ್ತದಿಂದ ಹೊರಡುವ ಬೈಕ್‌ ರ್‍ಯಾಲಿ ಆರ್‌ಪಿಡಿ ಕಾಲೇಜು ವೃತ್ತ, ವಡಗಾವಿ, ಖಾಸಬಾಗ, ಶಹಾಪುರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ, ರವಿವಾರ ಪೇಟೆ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ರಾಣಿ ಚನ್ನಮ್ಮ ವೃತ್ತ, ಶಿವಬಸವ ನಗರ, ಮಹಾಂತೇಶ ನಗರ, ಶ್ರೀ ನಗರ, ಆಂಜನೇಯ ನಗರ ಮಾರ್ಗವಾಗಿ ಸಾಗಿ ರಾಮತೀರ್ಥ ನಗರ ತಲುಪಲಿದೆ. 1 ಸಾವಿರಕ್ಕೂ ಅಧಿಕ ಬೈಕ್‌ ಸವಾರರು ಪಾಲ್ಗೊಳ್ಳಲಿದ್ದಾರೆ’ ಎಂದರು.

Home add -Advt

‘ಮೇ 4ರಂದು ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾಗುವ ಮೆರವಣಿಗೆ ಕಾಕತಿವೇಸ್‌, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ ಮಾರ್ಗವಾಗಿ ಸಾಗಿ ಲಿಂಗರಾಜು ಕಾಲೇಜು ಮೈದಾನ ತಲುಪಲಿದೆ. ವಿವಿಧ ರೂಪಕಗಳು, ಕಲಾ ತಂಡಗಳು ಭಾಗವಹಿಸಲಿವೆ’ ಎಂದು ಹೇಳಿದರು.

‘ಏಪ್ರಿಲ್‌ 30ರಂದು ಎಲ್ಲ ಸಂಘ–ಸಂಸ್ಥೆಗಳು ಮತ್ತು ಮನೆಗಳಲ್ಲಿ ಬಸವ ಜಯಂತಿ ಆಚರಿಸಲಿದ್ದೇವೆ. ಲಿಂಗಾಯತರಷ್ಟೇ ಅಲ್ಲ; ಎಲ್ಲ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ಇವೆಲ್ಲ ಕಾರ್ಯಕ್ರಮ ನಡೆಸಲಿದ್ದೇವೆ’ ಎಂದರು.

ರತ್ನಪ್ರಭಾ ಬೆಲ್ಲದ, ಶಂಕರ ಗುಡಸ್‌, ಅಶೋಕ ಬೆಂಡಿಗೇರಿ, ರಮೇಶ ಕಳಸಣ್ಣವರ, ಎ.ವೈ.ಬೆಂಡಿಗೇರಿ, ಎಂ.ಎಂ.ಬಾಳಿ, ಬಾಲಚಂದ್ರ ಬಾಗಿ ಇತರರಿದ್ದರು.

ಬಸವ ಜಯಂತಿ ಮಾತ್ರ ಆಚರಿಸಲು ತೀರ್ಮಾನ

‘ಬಸವ ಜಯಂತಿಯೊಂದಿಗೆ ರೇಣುಕಾಚಾರ್ಯರ ಜಯಂತಿಯನ್ನೂ ಒಟ್ಟಾಗಿ ಆಚರಿಸುವಂತೆ ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಅವರು, ಅಖಿಲ ಭಾರತ ವೀರಶೈವ ಮಹಾಸಭೆಗೆ ಕರೆ ಕೊಟ್ಟಿದ್ದರು. ಆದರೆ, ಎಲ್ಲ ಬೆಳಗಾವಿಯಲ್ಲಿ ಎಲ್ಲ ಸಂಘಟನೆಗಳು ಸೇರಿ ಚರ್ಚಿಸಿ, ಬಸವ ಜಯಂತಿಯನ್ನು ಮಾತ್ರ ಆಚರಿಸಲು ಒಮ್ಮತದಿಂದ ತೀರ್ಮಾನ ಕೈಗೊಂಡಿದ್ದೇವೆ. ಇದಕ್ಕೆ ವೀರಶೈವ ಮಹಾಸಭೆಯ ಜಿಲ್ಲಾ ಘಟಕವೂ ಸಹಮತ ವ್ಯಕ್ತಪಡಿಸಿದೆ’ ಎಂದು ಮುಖಂಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Related Articles

Back to top button