ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಕ್ಟೋಬರ್ 2 ಗಾಂಧಿ ಜಯಂತಿಯಂದು ಎಲ್ಲಾ ಗ್ರಾಮಪಂಚಾಯಿತಿ ಹಾಗೂ ವಾರ್ಡ್ ಗಳಲ್ಲಿ 75ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಪಕ್ಷದ ವತಿಯಿಂದ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಕೆಪಿಸಿಸಿಯಿಂದ ವೀಕ್ಷಕರನ್ನು ಕಳುಹಿಸಿಕೊಡಲಾಗುವುದು. ಸಭೆಯಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಪರಿಹಾರಗಳನ್ನು ಒದಗಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಚರ್ಚೆಗಳನ್ನು ನಡೆಸಬೇಕು. ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿ ಹಾಗೂ ಎಲ್ಲಾ ವಾರ್ಡ್ ಮಟ್ಟದಲ್ಲಿ ಸಭೆ ನಡೆಸಬೇಕು ಎಂದು ಸೂಚಿಸಿದರು.
ಕಾಂಗ್ರೆಸ್ ಪಕ್ಷ ಸಂಘಟನೆ ನಿಟ್ಟಿನಲ್ಲಿನ ಈ ಕಾರಕ್ರಮವನ್ನು ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುತ್ತಿದು, ಐತಿಹಾಸಿಕ ಸ್ಥಳ ಬೆಳಗಾವಿಯಿಂದ ಆರಂಭಿಸಲಾಗುವುದು ಎಂದರು.
ಇದೇ ವೇಳೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಿರೀಕ್ಷೆಗೂ ಕಡಿಮೆ ಸಂಖ್ಯೆಯಲ್ಲಿ ಫಲಿತಾಂಶ ಬಂದಿದೆ. ಆದರೂ ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಪಾಲಿಕೆ ಫಲಿತಾಂಶದ ವಿಚಾರವಾಗಿ ಎಲ್ಲಿ ಸಮಸ್ಯೆಯಾಗಿದೆ ಎಂಬ ಬಗ್ಗೆ ಗಂಭೀರವಾಗಿ ಚರ್ಚಿಸುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರ ವೈಫಲ್ಯ ಆಡಳಿತಕ್ಕೆ ಸಿಎಂ ರಾಜೀನಾಮೆಯೇ ಸಾಕ್ಷಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜನರಿಗೆ ಒಳ್ಳೆಯ ಆಡಳಿತ ನೀಡದಿರುವುದು ಸಿಎಂಗಳ ರಾಜೀನಾಮೆಗೆ ಸಾಕ್ಷಿ, ಗುಜರಾತ್ ನಲ್ಲಿ ಮೂರು ಮುಖ್ಯಮಂತ್ರಿಗಳ ಬದಲಾವಣೆಯಾಗಿದ್ದಾರೆ. ಕೇಂದ್ರ ಸರ್ಕಾರ ವೈಫಲ್ಯದಿಂದ ಬಿ.ಎಸ್.ಯಡಿಯೂರಪ್ಪ ಕಣ್ಣೀರಿನ ವಿದಾಯ ಹೇಳಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ದ ಡಿಕೆಶಿ ಗುಡುಗಿದರು.
ತೈಲ ಬೆಲೆ, ಅಡುಗೆ ಎಣ್ಣೆ ಗಗನಕ್ಕೇರುತ್ತಿವೆ. ಇದನ್ನು ವಿರೋಧಿಸಿ ಎತ್ತಿನ ಗಾಡಿ ಮೂಲಕ ವಿಧಾನ ಸೌಧವರೆಗೂ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿಯವರು ಭಾರತೀಯರ ಕಣ್ಣಲ್ಲಿ ರಕ್ತ ತರಿಸುತ್ತಿದ್ದಾರೆ. ಬಡ ಕುಟುಂಬಗಳ ರೋಧನೆ ಅವರಿಗೆ ತಿಳಿಯುತ್ತಿಲ್ಲವೇ, ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ದ್ರುವ್ ನಾರಾಯಣ, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಅಶೋಕ ಪಟ್ಟಣ, ಫಿರೋಜ್ ಸೇಠ್, ಎ.ಬಿ. ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ರಾಜು ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಿಜೆಪಿಯಿಂದ ಹಣದ ಆಫರ್; ಎಸಿಬಿ ತನಿಖೆಗೆ ಆಗ್ರಹಿಸಿದ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ