Kannada NewsLatest

ಕೋವಿಡ್ ಗೆ ಬಲಿಯಾದ ವ್ಯಕ್ತಿ; ಮನೆಗೆ ಭೇಟಿ ನೀಡಿ ಕುಂಟುಂಬಕ್ಕೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಜಿಲ್ಲೆಯ ವಿವಿಧ ಕಡೆ ಭೇಟಿ ನೀಡಿ ಸೋಂಕಿತರ ಜತೆ ಸಮಾಲೋಚನೆ ನಡೆಸಿದರು.

ಕಿತ್ತೂರು, ಎಂ.ಕೆ.ಹುಬ್ಬಳ್ಳಿ, ನೇಗಿನಾಳ ಹಾಗೂ ಹೂಲಿಕಟ್ಟಿ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕೋವಿಡ್ ಪರೀಕ್ಷೆ, ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಸಭೆಗಳನ್ನು ನಡೆಸಿದರು.

ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ:

ಬೈಲಹೊಂಗಲ ತಾಲ್ಲೂಕಿನಲ್ಲಿ ಅತೀ ಹೆಚ್ಚು ಸೋಂಕು ಕಂಡುಬಂದಿರುವ ನೇಗಿನಾಳ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ಮನೆಗೆ‌ ಭೇಟಿ ನೀಡಿ ಸಾಂತ್ವನ‌ ಹೇಳಿದರು. ಇದೇ ಸಂದರ್ಭದಲ್ಲಿ ಆ ಕುಟುಂಬದ ಎಲ್ಲ‌ ಸದಸ್ಯರಿಗೂ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ್ಯಾಟ್) ಮಾಡಿಸಿದರು.

ಇದಾದ ಬಳಿಕ ನೇಗಿನಾಳ ಗ್ರಾಮದ ಬಳಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಅಲ್ಲಿ ದಾಖಲಾಗಿರುವ ಲಕ್ಷಣರಹಿತ ಸೋಂಕಿತರ ಜತೆ ಮಾತುಕತೆ ನಡೆಸಿ, ಅವರ ಮನೋಬಲ‌ ಹೆಚ್ಚಿಸಿದರು.

ನೇಗಿನಾಳ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆಯನ್ನು ನಡೆಸಿದರು. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೋಂಕಿತರನ್ನು ಪತ್ತೆ ಮಾಡಿ ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲು ಹಾಗೂ ಆರೈಕೆ ಕೇಂದ್ರಗಳಿಗೆ ಕಳಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೋವಿಡ್ ಪತ್ತೆಗಾಗಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ್ಯಾಟ್) ನಡೆಸಲಾಗುತ್ತಿದೆ.

ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿರುವವರು ಹಾಗೂ ಕೋವಿಡ್ ಲಕ್ಷಗಳನ್ನು ಹೊಂದಿರುವವರು ಸ್ವಯಂಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಡ್ಡಾಯವಾಗಿ ಆರೈಕೆ ಕೇಂದ್ರಕ್ಕೆ ದಾಖಲಿಸಲು ಸೂಚನೆ:

ರ್ಯಾಟ್ ನಲ್ಲಿ ಕೋವಿಡ್ ಸೋಂಕು ದೃಢಪಟ್ಟರೆ ಅಂತಹ‌ ವ್ಯಕ್ತಿಗಳನ್ನು ತಕ್ಷಣವೇ ಸಮೀಪದ ಕೋವಿಡ್ ಆರೈಕೆ ಕೇಂದ್ರಗಳಿಗೆ ‌ದಾಖಲಿಸುವ ಮೂಲಕ ಸರಕಾರದ ಮಾರ್ಗಸೂಚಿ ಪ್ರಕಾರ ಔಷಧೋಪಚಾರ ಒದಗಿಸಬೇಕು ಎಂದು ಆರೋಗ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.

ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಕರಿಸಲು‌ಮನವಿ:

ಕೋವಿಡ್ ಪತ್ತೆ‌ ಹಾಗೂ ನಿಯಂತ್ರಣಕ್ಕೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸುತ್ತಿರುವುದರಿಂದ ಆರೋಗ್ಯ ಸಮೀಕ್ಷೆ ಮತ್ತು ಸಂಪರ್ಕಿತರ ಮಾಹಿತಿಯನ್ನು ಪಡೆಯಲು ಮನೆ‌ ಮನೆಗೆ ಬಂದಾಗ ಅವರಿಗೆ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ್ಯಾಟ್) ಮಾಡಲಾಯಿತು. ನಂತರ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಮಾರ್ಗಸೂಚಿ ಪಾಲನೆ‌ ಕುರಿತು ಜಾಗೃತಿ ಮೂಡಿಸಿದರು.

ಇದೇ ರೀತಿ ಎಂ.ಕೆ.ಹುಬ್ಬಳ್ಳಿಯ ಎಲ್ಲ ವಾರ್ಡುಗಳಲ್ಲಿ ರ್ಯಾಟ್ ನಡೆಸಲಾಯಿತು. ನಂತರ ಶಾಸಕ ಮಹಾಂತೇಶ ದೊಡ್ಡಗೌಡ್ರ ಅವರ ಉಪಸ್ಥಿತಿಯಲ್ಲಿ ಕಿತ್ತೂರಿನಲ್ಲೂ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಕೋವಿಡ್ ಪತ್ತೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಲಕ್ಷಣರಹಿತ ಸೋಂಕಿತರನ್ನು ಕಡ್ಡಾಯವಾಗಿ ಸಮೀಪದ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲು ನಿರ್ದೇಶನ ನೀಡಿದರು.

ಇಲ್ಲಿಯೂ ಕೂಡ ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡ್ರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ತಹಶಿಲ್ದಾರ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಮುಖ್ಯಮಂತ್ರಿಗಳೇ ಎಲ್ಲವನ್ನು ಮಾಡುವುದಾದರೇ ಮಂತ್ರಿಗಳು ಯಾಕೆ ಬೇಕು?: ಸತೀಶ ಜಾರಕಿಹೊಳಿ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button