ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದ ಕರ್ನಾಟಕ ರಾಜ್ಯೋತ್ಸವವೆಂದರೆ ಇಡೀ ದೇಶದಲ್ಲಿಯೇ ಹೆಚ್ಚು ವೈಭವ ಪೂರ್ಣವಾಗಿ ಆಚರಿಸುವ ರಾಜ್ಯೋತ್ಸವ.. ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ರಾಜ್ಯೋತ್ಸವಕ್ಕೆ ಬಂದಿದ್ದ ಎಲ್ಲರಿಗೂ ಧಾರವಾಡ ಪೇಡ ಹಂಚಿ ಕನ್ನಡ ಉಳಿಸಿ, ಬೆಳೆಸಿ ಎಂದು ಕರೆ ನೀಡಿದರು.
ಈ ರಾಜ್ಯೋತ್ಸವದ ದಿನ ಹಲವಾರು ವರ್ಷಗಳಿಂದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ರಾಜ್ಯೋತ್ಸವಕ್ಕೆ ಬಂದಿರುವಂತಹ ಎಲ್ಲರಿಗೂ ಹೋಳಿಗೆ ಊಟ ಬಡಿಸುತ್ತಾರೆ. ರಾಜ್ಯೋತ್ಸವ ದಿನದಂದು 30ರಿಂದ 40 ಸಾವಿರ ಜನರಿಗೆ ಹೋಳಿಗೆ ಊಟ ಮಾಡಿಸುವ ಸ್ವಾಮೀಜಿಗೆ ಕಳೆದ ವರ್ಷದಿಂದ ಬೇಸರವಿದೆಯಂತೆ. ಕಳೆದ ವರ್ಷ ಅತಿವೃಷ್ಟಿಯಾದರೆ ಈ ವರ್ಷ ಕೊರೊನಾ ಹಾವಳಿಯಿಂದಾಗಿ ರಾಜ್ಯೋತ್ಸವ ಆಚರಣೆ ಕಳೆಗುಂದಿದೆ. ಸರಳವಾಗಿ ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದ ಸ್ವಾಮೀಜಿ, ಈ ಬಾರಿ ಸಿಹಿ ಹಂಚುವ ಪದ್ಧತಿ ಬಿಡಲಿಲ್ಲ. ಹೋಳಿಗೆ ಬದಲಿಗೆ ಪೇಡಾ ಹಂಚಿದ್ದಾರೆ.
ಚೆನ್ನಮ್ಮ ಸರ್ಕಲ್ ಗೆ ತೆರಳಿ ನೂರಾರು ಧ್ವಜ, ಶಾಲು ಖರೀದಿ ಮಾಡಿ ಕನ್ನಡ ವ್ಯಾಪಾರಸ್ಥರಿಗೆ ಪ್ರೋತ್ಸಾಹಿಸಿದ್ದರು. ಬಳಿಕ ವಿನಾಯಕ ನಗರದಲ್ಲಿ ಹುಕ್ಕೇರಿ ಹಿರೇಮಠ ದ ರಾ ಬೇಂದ್ರೆ ಯುವಕ ಮಂಡಳ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸ್ಥಳೀಯ ಸಂಘಟನೆಗಳ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಎಲ್ಲರಿಗೂ ಧಾರವಾಡ ಪೇಡಾ ಹಂಚಿ ಆಶಿರ್ವದಿಸಿದರು.
ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಶೋಕ ಚಂದರಗಿ, ಬೆಳಗಾವಿಯಲ್ಲಿ ಎಲ್ಲರೂ ಕನ್ನಡ ಉಳಸಿ ಬೆಳೆಸಬೇಕು. ನಮ್ಮ ನಾಡು ನುಡಿ ಬಗ್ಗೆ ಕಾಳಜಿ ಬೆಳೆಸುವುದು ನಮ್ಮ ಕರ್ತವ್ಯ ಎಂದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುರೇಶ್ ಬಾಬು, ರಾಜೇಶ್ ಎನ್ ಗುಡ್ ಮಟ್ಟಿ, ರಾಜು ಪಡಗೂರು ಶಿವಾನಂದ ಪಾಟೀಲ್, ಚನ್ನಬಸು ಪಾಟೀಲ್, ಪೃಥ್ವಿ ಸಿಂಗ್ ಪ್ರಕಾಶ್ ಬಿ ಬಿ ಹಾಗೂ ಶಂಕರ್ ಬಾಗೇವಾಡಿ ಇನ್ನೂ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ