*ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇ ಗೌಡ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ವಾಕ್ಸಮರ; ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕೈ ಶಾಸಕ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇ ಗೌಡ ಹಾಗೂ ಹೆಚ್.ಡಿ.ರೇವಣ್ಣ ನಡಿವೆ ವಾಗ್ಯುದ್ಧ ಆರಂಭವಾಗಿದ್ದು, ಏಕವಚನದಲ್ಲಿಯೇ ಬೈದಾಡಿಕೊಂಡ ಘಟನೆ ನಡೆದಿದೆ.
ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಎದ್ದು ನಿಂತ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ, ತನಗೆ ಮತನಾಡಲು ಅವಕಾಶ ಕೊಡಬೇಕು ಎಂದು ಹೇಳಿದರು.
ಇದರಿಂದ ಕೆಂಡಾಮಂಡಲರಾದ ಶಿವಲಿಂಗೇಗೌಡ ರೇವಣ್ಣನವರೇ ನಿಮ್ಮದು ನೀಚಬುದ್ದಿ. ಮಾನ ಮರ್ಯಾದೆ ಇಲ್ವೇನ್ರೀ. ಮಾತನಾಡುತ್ತಿದ್ದಾಗ ಮಧ್ಯದಲ್ಲಿ ತಮಗೆ ಅವಕಾಶ ಕೊಡಬೇಕು ಎಂದು ಈ ರೀತಿ ಕೆಲಸ ಮಾಡಬೇಡಿ… ಎಂದು ಕೂಗಾಡಿದರು. ಒಂದು ವಿಷಯ ಎತ್ತಿದರೂ ಬಂದು ಗಲಾಟೆ ಮಾಡುತ್ತೀರಾ. ನನ್ನ ವಿರುದ್ಧ ಧರಣಿ ನಡೆಸ್ತೀರಾ. ರೇವಣ್ಣ ನಿನ್ನಿಂದ ನನ್ನ ಏನೂ ಮಾಡಲು ಆಗಲ್ಲ. ನಿಮ್ಮ ಪಕ್ಷವನ್ನೇ ಬಿಟ್ಟು ಬಂದಿದ್ದೇನೆ ಎಂದು ಈ ರೀತಿ ವರ್ತನೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಶಿವಲಿಂಗೇಗೌಡರ ಮಾತಿಗೆ ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಉಳಿದ ಜೆಡಿಎಸ್ ಸದಸ್ಯರು ಶಿವಲಿಂಗೆ ಗೌಡ ವಿರುದ್ಧ ಮುಗಿಬಿದ್ದರು. ರೇವಣ್ಣ ವಿರುದ್ಧ ಆರೋಪ ಖಂಡಿಸಿ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಕಲಾಪಕ್ಕೆ ಅಡ್ಡಿಯಾಗುತ್ತಿದ್ದಂತೆ ಸ್ಪೀಕರ್ ಕೆಲ ಕಾಲ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ