
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಚಾಲಕರು, ನಿರ್ವಾಹಕರ ವಿಶ್ರಾಂತಿಗೆ ಅನುಕೂಲವಾಗುವಂತೆ ಹಂತ ಹಂತವಾಗಿ ಇತರೆ ಎಲ್ಲ ಸಾರಿಗೆ ಘಟಕಗಳಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಹೇಳಿದರು.

ಕರ್ತವ್ಯದ ಮೇರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಚಾಲಕರು ಹಾಗೂ ನಿರ್ವಾಹಕರುಗಳಿಗೆ ವಸತಿಗೆ ಬಹಳ ತೊಂದರೆ ಆಗುತ್ತಿದ್ದು, ಇದನ್ನು ಗಮನಿಸಿ ಮಹಿಳಾ ಹಾಗೂ ಪುರುಷರಿಗಾಗಿ ಪ್ರತ್ಯೇಕ ಎರಡು ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು
ನೌಕರರ ಬೇಡಿಕೆ ಶೀಘ್ರ ಈಡೇರಿಕೆ ಭರವಸೆ:
ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಒಟ್ಟು 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಕೊಡಲಾಗಿದೆ. ಆರನೇ ವೇತನ ಆಯೋಗಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದು, ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮಿತಿಯು ಕಾರ್ಯಾರಂಭಿಸಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ವಿದ್ಯಾರ್ಥಿಗಳ ಪಾಸ್ ವಿತರಣೆ ಆರಂಭ:
ಶಾಲಾ -ಕಾಲೇಜುಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಕಾರ್ಯ ಪ್ರಾರಂಭವಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಯಾವುದೇ ರೀತಿ ತೊಂದರೆ ಆಗದಂತೆ ಅವರನ್ನು ಶಾಲಾ -ಕಾಲೇಜುಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಏಪ್ರಿಲ್ ವೇಳೆಗೆ ಬಸ್ ನಿಲ್ದಾಣ ನಿರ್ಮಾಣ:
ಕೋವಿಡ್ ಹಿನ್ನಲೆಯಲ್ಲಿ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿಯು ವಿಳಂಬವಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸುಗಳನ್ನು ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್ ಅಂತ್ಯದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ