*ಬೆಳಗಾವಿ ವಿಮಾನ ರದ್ದು: ಏರ್‌ಪೋರ್ಟ್‌ನಲ್ಲಿ ಪರದಾಡಿದ ಪ್ರಯಾಣಿಕರು*
ಪ್ರಗತಿವಾಹಿನಿ ಸುದ್ದಿ: ಸ್ಟಾರ್ ಏರ್ ಸಂಸ್ಥೆಯ ತಿರುಪತಿ-ಬೆಳಗಾವಿ ವಿಮಾನ ರದ್ದಾಗಿರುವ ಪರಿಣಾಮ ತಿರುಪತಿ ಏರ್‌ಪೋರ್ಟ್‌ನಲ್ಲಿ ಬೆಳಗಾವಿ ಮೂಲದ ಪ್ರಯಾಣಿಕರು ಪರದಾಟ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ತಿರುಪತಿಯಿಂದ ಬೆಳಗಾವಿಗೆ ವಾಪಸ್ ಆಗಬೇಕಿದ್ದ ಪ್ರಯಾಣಿಕರು ತಿರುಪತಿ ವಿಮಾನ ನಿಲ್ದಾಣದಲ್ಲಿ ಇರುವ ಸ್ಟಾರ್ ಏರ್ ಸಂಸ್ಥೆಯ ರಿಜರ್ವೆಶನ್ ಕೌಂಟರ್ ಬಳಿ ಪರದಾಟ ನಡೆಸಿದ್ದಾರೆ.
ಪ್ರಯಾಣಿಕ ಮಹಾಂತೇಶ್ ಎಂಬುವರ ಮನೆಯ ಕುಟುಂಬ ಸದಸ್ಯ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಮೂಲದ ಮಹಾಂತೇಶ್ ಊರಿಗೆ ವಾಪಸ್ ಆಗಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಏಕಾಏಕಿ ಬೆಳಗಾವಿಗೆ ಬರಬೇಕಿದ್ದ ವಿಮಾನ ರದ್ದು ಮಾಡಲಾಗಿದೆ.
ಏರ್ಪೋರ್ಟ್ ನಲ್ಲಿ ಮಹಾಂತೇಶ್ ಹಾಗೂ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿರುಪತಿ ತಿಮ್ಮಪ್ಪ ದರ್ಶನಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ವಕೀಲ ಸುಭಾಷ್ ನಾಯಕ್, ಬಸಯ್ಯ ಅವರವಾಡ್, ಮಹಾಂತೇಶ್, ಮಲ್ಲಪ್ಪ, ಸಂತೋಷ ಸೇರಿ ಒಟ್ಟು 8 ಜನ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಸಂಜೆ 7.30ಕ್ಕೆ ಹಾರಾಟ ಮಾಡಬೇಕಿದ್ದ ಸ್ಟಾರ್ ಏರ್ಲೈನ್ ವಿಮಾನ ರದ್ದಾಗಿದೆ. ಮೊದಲು ಬುಕ್ಕಿಂಗ್ ಮಾಡಿಕೊಂಡು ಈಗ ದಿಢೀರ್ ವಿಮಾನ ರದ್ದು ಮಾಡಿದ ಸ್ಟಾರ್ ಏರ್ಲೈನ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ