*ಬೆಳಗಾವಿ ಕೂಲ್ ಕೂಲ್: ರಸ್ತೆ ಎಲ್ಲಾ ಫುಲ್ ಫುಲ್* *ಇನ್ನೂ 3 ದಿನ ಮಳೆ?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಬೆಳಗಾವಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಸಾಯಂಕಾಲ ಸುಮಾರಿಗೆ ವರುಣ ದರ್ಶನ ಕೊಟ್ಟಿದ್ದು, ವರ್ಷದ ಮೊದಲ ವರ್ಷಧಾರೆಗೆ ಜನ ಫುಲ್ ಖುಷ್ ಆಗಿದ್ದಾರೆ. ಆದರೆ ಭಾರಿ ಮಳೆಗೆ ಅನೇಕ ರಸ್ತೆಗಳು ಕೆರೆಯಂತಾಗಿದ್ದು, ಜನ ಪರದಾಡಿದ್ದಾರೆ.
ಕಳೆದ 1 ತಿಂಗಳಿಂದ ಬಿಸಿಲಿನ ಆರ್ಭಟ ಜೋರಾಗಿದೆ. ವಿಜಯಪುರವನ್ನು ಮೀರಿಸುವಷ್ಟು ಬಿಸಿಲು ಬೆಳಗಾವಿಯಲ್ಲಿ ದಾಖಲಾಗುತ್ತಿತ್ತು. ಹಗಲಿನಲ್ಲಿ ಮನೆ ಬಿಟ್ಟು ಹೊರಗೆ ಬಾರದಷ್ಟು ಬಿಸಿಲಿದ್ದರೆ, ರಾತ್ರಿ ಹೊತ್ತು ಹೆಚ್ಚು ಸೆಕೆ ಇದ್ದ ಹಿನ್ನೆಲೆಯಲ್ಲಿ ನಿದ್ರೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.
ಯಾವಾಗ ಮಳೆ ಆಗಿ, ನಾವೆಲ್ಲಾ ಕೂಲ್ ಆಗುತ್ತೇವೋ ಎಂದು ಜನರು ಕಾಯುತ್ತಿದ್ದರು. ನಿರೀಕ್ಷೆಯಂತೆ ಗುಡುಗು ಸಿಡಿಲು ಬಿರುಗಾಳಿ ಸಹಿತ ಮಳೆ ಆಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ರಸ್ತೆ ತುಂಬೆಲ್ಲಾ ನೀರು ನಿಂತಿವೆ.
ಗುಡುಗು ಸಹಿತ ಕುಂದಾನಗರಿ ಬೆಳಗಾವಿಯಲ್ಲಿ ಭಾರಿ ಮಳೆಗೆ ಅನೇಕ ರಸ್ತೆಗಳು ಕೆರೆಯಂತಾಗಿದೆ. ಮಳೆ ನಿಂತ ಮೇಲೆ ರಸ್ತೆ ದಾಟಲು ಜನ ಹಾಗೂ ವಾಹನ ಸವಾರರು ಪರದಾಡಿದ್ದಾರೆ. ಮುಂದಿನ ಮೂರು ದಿನ ಬೆಳಗಾವಿಯಲ್ಲಿ ಮಳೆ ಆಗಲಿದ್ದು, ಯೆಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ.