*ಅಪಾರ್ಟ್ ಮೆಂಟ್ ಗೆ ನುಗ್ಗಿದ ಚಿರತೆ; ಬೆಂಗಳೂರಿನಲ್ಲಿ ಮನೆಯಿಂದ ಹೊರ ಬರಲು ಆತಂಕಕ್ಕೀಡಾದ ಜನರು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ, ಮೈಸೂರು, ಮಂಡ್ಯ ಬಳಿಕ ಈಗ ರಾಜಧಾನಿ ಬೆಂಗಳೂರಿನಲ್ಲಿಯೂ ಚಿರತೆ ಕಾಟ ಶುರುವಾಗಿದೆ. ಅಪಾರ್ಟ್ ಮೆಂಟ್ ಗಳಿಗೂ ಚಿರತೆ ನುಗ್ಗಿದ್ದು, ಸಿಲಿಕಾನ್ ಸಿಟಿ ಜನರು ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರು ನಗರದ ಬೊಮ್ಮನಹಳ್ಳಿ ಕೂಡ್ಲು ಗೆಟ್ ಬಳಿಯ ಕ್ಯಾಡೆನ್ಜಾ ಅಪಾರ್ಟ್ ಮೆಂಟ್ ಗೆ ಚಿರತೆಯೊಂದು ನುಗ್ಗಿದ್ದು, ಅಪಾರ್ಟ್ ಮೆಂಟ್ ನ ವಾಹನಗಳ ನಿಲುಗಡೆ ಸ್ಥಳಗಳಲ್ಲಿ, ಲಿಫ್ಟ್ ಬಾಗಿಲಿನ ಬಳಿ, ಕಾಂಪೌಂಡ್ ನಲ್ಲಿ ಆರಾಮವಾಗಿ ಚಿರತೆ ಸಂಚಾರ ಮಾಡಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಕಂಡು ಅಪಾರ್ಟ್ ಮೆಂಟ್ ನಿವಾಸಿಗಳು, ಸ್ಥಳೀಯರು ಭಯಭೀತರಾಗಿದ್ದು, ಮನೆಯಿಂದ ಹೊರಬರಲು ಆತಂಕ ಪಡುತ್ತಿದ್ದಾರೆ.
ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ರಸ್ತೆಯಲ್ಲಿ, ಹೆಚ್.ಎಸ್.ಆರ್.ಲೇಟ್ ಸುತ್ತಮುತ್ತ ನಿನ್ನೆ ಚಿರತೆ ಪ್ರತ್ಯಕ್ಷವಾಗಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಓಡಾಟವಿರುವುದರಿಂದ ರಾತ್ರಿ ವೇಳೆ ಒಬ್ಬೊಬ್ಬರೇ ಓಡಾಡಬೇಡಿ. ಅನಿವಾರ್ಯವಿದ್ದರೆ ಕಾರಿನಲ್ಲಿ ಓಡಾಡುವಂತೆ ಮೈಕ್ ಗಳ ಮೂಲಕ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಚಿರತೆಯೊಂದು ಅಪಾರ್ಟ್ ಮೆಂಟ್ ಗೆ ನುಗ್ಗಿ, ರಾಜಾರೋಷವಾಗಿ ಲಿಫ್ಟ್ ಬಾಗಿಲು ಬಳಿ, ಪಾರ್ಕಿಂಗ್ ಸ್ಥಳಗಳಲ್ಲಿ ಸಂಚರಿಸುತ್ತಿರುವ ದೃಶ್ಯ ವೈರಲ್ ಆಗಿದ್ದು, ಇಂದು ಬೆಳಗಿನ ಜಾವ 2:30ರ ಸುಮಾರಿನಲ್ಲಿ ಚಿರತೆ ಓಡಾಟ ನಡೆಸಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ