
ಪ್ರಗತಿವಾಹಿನಿ ಸುದ್ದಿ: ಈ ಮೊದಲು ಜಾತಿ ಗಣತಿ ಮಾಡಲು ಆಯೋಗದ ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ, ಕಾಂಗ್ರೆಸ್ ಸರ್ಕಾರವಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿನ ಎಲ್ಲ ಜಾತಿಗಳ ಮಾಹಿತಿ ಒಳಗೊಂಡಿದೆ. ವರದಿ ವೈಜ್ಞಾನಿಕವಾಗಿಲ್ಲ ಎಂಬ ಆರೋಪ ಸುಳ್ಳು. ಇದು ಸಾಮಾಜಿಕ ಶೈಕ್ಷಣಿಕ ವರದಿಯಾಗಿದ್ದು, ಜಾತಿ ಗಣತಿ ವರದಿ ಅಲ್ಲ. ಈ ವರದಿ ಜಾರಿಯಾಗಬೇಕು ಎಂದು ನಾನು ಬಯಸುವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.32 ರಿಂದ ಶೇ.51 ಏರಿಕೆ ಮಾಡುವಂತೆ ಮೊನ್ನೆಯಷ್ಟೇ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಹಿಂದುಳಿದ ತಳ ಸಮುದಾಯಗಳೂ ಸೇರಿಕೊಂಡಂತೆ ಇತರೇ ಒಬಿಸಿ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಿಸಿ, ಆಯಾ ಜಾತಿಯವರ ಜನಸಂಖ್ಯೆಗೆ ಅನುಗುಣಗವಾಗಿ ಮೀಸಲಾತಿ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿದ್ದು ಗೊತ್ತೇ ಇದೆ.