Kannada NewsKarnataka NewsLatest

ಅಸಲಿ- ನಕಲಿ ಗುರುತಿಸಲು ವಿಫಲವಾದ ಬಿಜೆಪಿ ಹೈಕಮಾಂಡ್; ನಾಯಕತ್ವ ಗಟ್ಟಿಗೊಳಿಸಿಕೊಂಡ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿಯ ಚುನಾವಣೆ ಫಲಿತಾಂಶ ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ ಗೆ ಬಹು ದೊಡ್ಡ ಪಾಠ ಕಲಿಸಿದೆ. ಪಕ್ಷ ಕಟ್ಟಿದವರನ್ನು ಕಡೆಗಣಿಸಿ ಯಾರದ್ದೋ ಮಾತು ಕೇಳಿ ನಿರ್ಧಾರ ತೆಗೆದುಕೊಂಡ ತಪ್ಪಿಗೆ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ. ಜೊತೆಗೆ, ಹಲವರ ಅಧಿಕಾರದ ಅಮಲು ಇಳಿಸಿದರೆ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದವರ ಬಾಯಿ ಮುಚ್ಚಿಸಿದೆ.

ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಬಿಜೆಪಿ ಸಣ್ಣ ಸಣ್ಣ ತಪ್ಪಿನಿಂದ 4 -5 ಕ್ಷೇತ್ರಗಳನ್ನು ಕಳೆದುಕೊಡಿದೆ. ಬುಟ್ಟಿ ತೋರಿಸಿ ಒಳಗೆ ಹಾವಿದೆ ಎನ್ನುತ್ತಿದ್ದವರನ್ನು ನಂಬಿ ಕೆಟ್ಟಿದೆ. ಯಾವುದು ಅಸಲಿ ಚಿನ್ನ, ಯಾವುದು ನಕಲಿ ಚಿನ್ನ ಎಂದು ಗುರುತಿಸುವಲ್ಲಿ ಎಡವಿದೆ.

ಅಥಣಿಯಲ್ಲಿ ಲಕ್ಷ್ಮಣ ಸವದಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಾದವನ್ನು ಅಲ್ಲೇ ತಣ್ಣಗಾಗಿಸಲು ಅವಕಾಶವಿತ್ತಾದರೂ ಸಂಬಂಧವಿಲ್ಲದವರ ಸವದಿಯಂತಹ ನಾಯಕನನ್ನು ಹಾಗೂ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿತು. ಲಕ್ಷ್ಮಣ ಸವದಿಗೆ ಟಿಕೆಟ್ ಗಿಂತ ಸ್ವಾಭಿಮಾನಕ್ಕೆ ದಕ್ಕೆಯಾಗಿದ್ದರಿಂದ ಅವರು ಪಕ್ಷದಿಂದ ಹೊರನಡೆದರು. ಇದೇ ವಿಷಯವನ್ನು ಅವರು ಅಥಣಿಯ ಸ್ವಾಭಿಮಾನ ಎನ್ನುವಂತೆ ಬಿಂಬಿಸಲು ಯಶಸ್ವಿಯಾದರು. ಅಥಣಿಯ ವಿಷಯವನ್ನು ಸರಿಯಾಗಿ ನಿಭಾಯಿಸಿದ್ದರೆ ಕಾಗವಾಡವೂ ಕೈ ತಪ್ಪುತ್ತಿರಲಿಲ್ಲ.

ಯಮಕನಮರಡಿಯಲ್ಲಿ ಕಳೆದಬಾರಿ ಅತ್ಯಲ್ಪ ಮತಗಳಿಂದ ಪರಾಭವಗೊಡಿದ್ದ ಮಾರುತಿ ಅಷ್ಟಗಿಯವರನ್ನು ಬಿಟ್ಟು ಒಳ ಒಪ್ಪಂದ ಮಾಡಿಕೊಂಡಂತಿದ್ದ ಬಸವರಾಜ ಹುಂದ್ರಿಗೆ ಟಿಕೆಟ್ ಕೊಟ್ಟು ಸುಲಭವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರವನ್ನು ಕಳೆದುಕೊಂಡಿತು. ಬೈಲಹೊಂಗಲದಲ್ಲಿ ಬಂಡಾಯ ಶಮನಕ್ಕೆ ಗಂಭೀರ ಪ್ರಯತ್ನ ಆಗಲೇ ಇಲ್ಲ. ಬೆಳಗಾವಿ ಉತ್ತರದಲ್ಲಿ ಹಾಲಿ ಶಾಸಕ ಅನಿಲ ಬೆನಕೆಯನ್ನು ಬದಲಿಸುವ ಅನಿವಾರ್ಯತೆ ಇರಲಿಲ್ಲ. ಜಾತಿ ಒತ್ತಡದ ಮೇಲೆ ಟಿಕೆಟ್ ಕೊಟ್ಟಿದ್ದರೆ ಆ ಜಾತಿಯವರು ಮತಗಟ್ಟೆಗೆ ಬಂದು ಮತ ಹಾಕುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು.

ಬೆಳಗಾವಿ ಗ್ರಾಮೀಣದಲ್ಲಿ ಸ್ಥಳೀಯರ ಅಭಿಪ್ರಾಯ ಕಡೆಗಣಿಸಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಯಿತು. ಕುಡಚಿಯಲ್ಲಿ ಪಕ್ಷದ ಮುಖಂಡರೇ ಒಂದಿಷ್ಟು ಗೊಂದಲ ಸೃಷ್ಟಿ ಮಾಡಿ ಕ್ಷೇತ್ರವನ್ನು ಕಳೆದುಕೊಳ್ಳುವಂತಾಯಿತು. ನಿಪ್ಪಾಣಿಯಲ್ಲಿ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸುವ ಯತ್ನ ಕೆಲವರಿಂದ ನಡೆದರೂ ಅದಕ್ಕೆ ಬ್ರೇಕ್ ಹಾಕುವ ಕೆಲಸವನ್ನು ಹೈಕಮಾಂಡ್ ಮಾಡಲಿಲ್ಲ. ಆದರೆ, ಅಭ್ಯರ್ಥಿ ಶಶಿಕಲಾ ಜೊಲ್ಲೆ ಪ್ರಬಲರಾಗಿರುವುದರಿಂದ ಕ್ಷೇತ್ರ ಕೈ ತಪ್ಪಲಿಲ್ಲ.

ಈಗ ಬಿಜೆಪಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ಅಸಲಿಯಾವುದು, ನಕಲಿ ಯಾವುದು ಕಂಡಿಹಿಡಿದು ಸರಿದಾರಿಗೆ ತರುವ ಕೆಲಸ ಮಾಡಬೇಕಿದೆ. ಇಲ್ಲವಾದಲ್ಲಿ ಲೋಕಸಭಾ ಚುನಾವಣೆಯಲ್ಲೂ ಪಕ್ಷವನ್ನು ಜನರು ಮೂಲಗುಂಪು ಮಾಡಿಯಾರು.

ಇದರ ಜೊತೆಗೆ, ಡಬಲ್ ಎಂಜಿನ್ ಸರಕಾರದ ಅಧಿಕಾರದ ಅಮಲು ಜನಸಾಮಾನ್ಯರನ್ನು ಮಾತನಾಡಿಸುವ ಸೌಜನ್ಯವೂ ಇಲ್ಲದಂತೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಕಾಂಗ್ರೆಸ್ ದೂಷಿಸುವ ಕೆಲಸವನ್ನಷ್ಟೇ ಕಾರ್ಯಕರ್ತರು ಮಾಡುತ್ತಿದ್ದರು. ಜನರ ಕಷ್ಟ ಸುಖ ಕೇಳುವ ಕೆಲಸವಾಗಲೇ ಇಲ್ಲ. ಭಾವನೆಗಳನ್ನು ಪ್ರಚೋದಿಸುವುದರಿಂದ ಜನರ ಹೊಟ್ಟೆ ತುಂಬುವುದಿಲ್ಲ.

ರಾಜ್ಯದ ಬಹುತೇಕ ಕಡೆ ಆಡಳಿತ ವ್ಯವಸ್ಥೆಯಂತೂ ಎಷ್ಟರಮಟ್ಟಿಗೆ ಹದಗೆಟ್ಟಿತ್ತೆಂದರೆ ಸಣ್ಣ ಪುಟ್ಟ ಅಧಿಕಾರಿ, ಸಿಬ್ಬಂದಿಯನ್ನೂ ಮಾತನಾಡಿಸುವ ಸ್ಥಿತಿ ಇರಲಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಮಾಡಿದ ಆದೇಶವನ್ನೂ ಸಣ್ಣ ಕ್ಲರ್ಕ್ ತೆಗೆದು ಕಸದ ಬುಟ್ಟಿಗೆ ಹಾಕುವಮಟ್ಟಿಗೆ ಬಂದು ನಿಂತಿತ್ತು. ಈಗ ಅಧಿಕಾರದ ಗದ್ದುಗೆ ಏರುತ್ತಿರುವ ಕಾಂಗ್ರೆಸ್, ಭ್ರಷ್ಟಾಚಾರ ನಿಯಂತ್ರಿಸುವ, ಅಧಿಕಾರಿ, ಸಿಬ್ಬಂದಿಯನ್ನು ಸರಿದಾರಿಗೆ ತರುವ ಕೆಲಸವನ್ನು ಆದ್ಯತೆಯ ಮೇಲೆ ಮಾಡದಿದ್ದಲ್ಲಿ ಸರಕಾರದ ಬದಲಾವಣೆ ವ್ಯರ್ಥವಾಗಲಿದೆ.

ಲಕ್ಷ್ಮೀ ಹೆಬ್ಬಾಳಕರ್ ನಾಯಕತ್ವ ಗಟ್ಟಿ

ಈ ಚುನಾವಣೆಯ ಪಾಸಿಟಿವ್ ಬೆಳವಣಿಗೆಗಳಲ್ಲೊಂದು ಎಂದರೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ನಾಯಕತ್ವ ಮತ್ತಷ್ಟು ಗಟ್ಟಿಯಾಯಿತು. ಅವರ ಕಾಲು ಜಗ್ಗಲು ಸ್ವಪಕ್ಷೀಯರೂ ಸೇರಿದಂತೆ ಸಾಕಷ್ಟು ಘಟಾನುಘಟಿಗಳು ಪ್ರಯತ್ನಿಸಿದರೂ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೆ ತಮ್ಮ ದಾರಿಯಲ್ಲಿ ತಾವು ನಡೆದಿದ್ದರಿಂದ ಇಡೀ ರಾಜ್ಯವೇ ಅವರೆಡೆಗೆ ತಿರುಗಿ ನೋಡುವಂತಾಯಿತು.

ಸುಖಾ ಸುಮ್ಮನೆ ಕಾಲು ಕೆದರಿ ಜಗಳಕ್ಕೆ ಬರುತ್ತಿದ್ದವರಿಗೆಲ್ಲ ಉತ್ತರಿಸುತ್ತ ಹೋಗಿದ್ದರೆ ಲಕ್ಷ್ಮೀ ಹೆಬ್ಬಾಳಕರ್ ಎಡವಿ ಬೀಳುವ ಸಂಭವವಿರುತ್ತಿತ್ತು. ಅವರು ಹಾಗೆ ಮಾಡಲಿಲ್ಲ. ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ಗುರಿ ತಲುಪಲು ಏನು ಬೇಕೋ ಅದನ್ನಷ್ಟೆ ಮಾಡುತ್ತ ಸಾಗಿದರು. ಕೇವಲ ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಳ್ಳುವ ಕೆಲಸವನ್ನಷ್ಟೆ ಅವರು ಮಾಡಲಿಲ್ಲ. ಬದಲಾಗಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಗಟ್ಟಿಗೊಳಿಸಿದರು.

ಅಥಣಿಯಲ್ಲಿನ ರಾಜಕೀಯ ಬೆಳಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಲಕ್ಷ್ಮಣ ಸವದಿಯನ್ನು ಕಾಂಗ್ರೆಸ್ ಗೆ ಸೆಳೆಯುವಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪಾತ್ರ ಬಹಳ ದೊಡ್ಡದಿದೆ. ಇದು ಪಕ್ಷಕ್ಕೆ ಸಾಕಷ್ಟು ಗೆಲುವು ತಂದುಕೊಟ್ಟಿತು.

ಕುಡಚಿಯಲ್ಲಿ ಮಹೇಂದ್ರ ತಮ್ಮಣ್ಣವರ್ ಅವರನ್ನು, ಸವದತ್ತಿಯಲ್ಲಿ ವಿಶ್ವಾಸ ವೈದ್ಯ, ಕಿತ್ತೂರಲ್ಲಿ ಬಾಬಾಸಾಹೇಬ ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿಕೊಂಡು ಬರುವಲ್ಲಿ ಅವರ ಪಾತ್ರ ದೊಡ್ಡದಿದೆ. ಇಡೀ ಜಿಲ್ಲೆಯಲ್ಲಿ ದುರ್ಬಲವಾಗಿದ್ದ ಪಕ್ಷ ಸಂಘಟನೆ ಗಟ್ಟಿಗೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಚನ್ನರಾಜ ಹಟ್ಟಿಹೊಳಿ ಅವರು ಸ್ಪರ್ಧಿಸಿದ್ದ ವಿಧಾನಪರಿಷತ್ ಚುನಾವಣೆ ವೇಳೆಯೇ ತಮ್ಮ ಶಕ್ತಿ ಪ್ರದರ್ಶಿಸಿದ್ದ ಲಕ್ಷ್ಮೀ ಹೆಬ್ಬಾಳಕರ್, ಜಾತಿ, ಪ್ರದೇಶಗಳನ್ನು ಮೀರಿ ಬೆಳೆದು ನಿಂತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಬೆಳಗಾವಿ ಜಿಲ್ಲೆಗೆ ನಾಯಕತ್ವ ನೀಡುವ ಸಾಮರ್ಥ್ಯವನ್ನು ಜನರು ಅವರಲ್ಲಿ ಗುರುತಿಸುವಂತಾಗಿದೆ.

ಪ್ರಸ್ತುತ ಸರಕಾರದಲ್ಲಿ ಮಂತ್ರಿಯಾಗಿ ಬೆಳಗಾವಿ ಜಿಲ್ಲೆಯ ಬೆಳವಣಿಗೆಗೆ ಅವರಿಂದ ದೊಡ್ಡ ಕೊಡುಗೆ ಸಿಗಲಿ ಎನ್ನುವುದು ಜನರ ಆಶಯವಾಗಿದೆ.

https://pragati.taskdun.com/vidhanasabha-electionbelagavi-rurallakshmihebbalkarwin/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button