Karnataka News

*ವಿಚ್ಛೇದಿತ ಮಹಿಳೆಗೆ ಮೋಸ: ಬಿಜೆಪಿ ಮುಖಂಡ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯೊಬ್ಬರಿಗೆ ಮೋಸ ಮಾಡಿ ವಂಚಿಸಿರುವ ಆರೋಪದಲ್ಲಿ ಬಿಜೆಪಿ ಮುಖಂಡ ಶರತ್ ಕಲ್ಯಾಣಿಯನ್ನು ಬಂಧಿಸಲಾಗಿದೆ.

ಶರತ್ ಕಲ್ಯಾಣಿ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಮುಖಂಡ. ಜಿಲ್ಲಾ ಬಿಜೆಪಿ ಸೋಷಿಯಲ್ ಮೀಡಿಯಾ ಪ್ರಮುಖನಾಗಿದ್ದು, ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ 43 ವರ್ಷದ ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ. ಅಲ್ಲದೇ ಆಕೆಯಿಂದ 4 ಲಕ್ಷ ರೂಪಾಯಿ ಹಣವನ್ನೂ ಪಡೆದು ವಂಚಿಸಿದ್ದ.

ಈ ಹಿನ್ನೆಲೆಯಲ್ಲಿ ನೊಂದ ಮಹಿಳೆ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಶರತ್ ಕಲ್ಯಾಣಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ತನ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಶರತ್ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ವಿಜಯಪುರ ಬಳಿ ಬಂಧಿಸಲಾಗಿದೆ.

ಆರೋಪಿ ಶರತ್ ಕಲ್ಯಾಣಿ ತನಗೆ ಮದುವೆಯಾಗಿರುವ ವಿಷಯ ಮುಚ್ಚಿಟ್ಟು, ವಿಚ್ಛೇದಿತ ಮಹಿಳೆಗೆ ತಾನು ಅವಿವಾಹಿತ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ ಮದುವೆಯಾಗುವುದಾಗಿ ಹೇಳಿದ್ದ. ಕೆಲ ತಿಂಗಳಿಂದ ನಿರಂತರ ಸಂಪರ್ಕದಲ್ಲಿದ್ದ ಶರತ್, ಬಲವಂತವಾಗಿ ಮಹಿಳೆಯನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದಾನೆ. ಅಲ್ಲದೇ ತನಗೆ ಅರ್ಥಿಕ ಸಂಕಷ್ಟವಿದೆ ಹಣಬೇಕು ಎಂದು ಹೇಳಿ 4 ಲಕ್ಷ ರೂಪಾಯಿ ಹಣವನ್ನು ಮಹಿಳೆಯಿಂದ ಪಡೆದುಕೊಂಡಿದ್ದಾನೆ. ಸಂತ್ರಸ್ತ ಮಹಿಳೆ ತನ್ನನ್ನು ವಿವಾಹವಾಗುವಂತೆ ಒತ್ತಾಯಿಸುತ್ತಿದ್ದಂತೆ ಆತ ಆಕೆಯಿಂದ ದೂರವಾಗ ತೊಡಗಿದ್ದಾನೆ. ಮದುವೆಯೂ ಆಗದೇ ಕೊಟ್ಟ ಹಣವನ್ನೂ ಹಿಂತಿರುಗಿಸದೇ ತಪ್ಪಿಸಿಕೊಳ್ಳುತ್ತಿದ್ದ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button