Belagavi NewsBelgaum NewsKannada NewsKarnataka NewsLatestNationalPolitics

*ಯಲ್ಲಮ್ಮನ ದೇವಸ್ಥಾನದ ಬಳಿ ದಲ್ಲಾಳಿಗಳ ದರ್ಬಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಏಜೆಂಟರ ಹಾವಳಿ ಮಿತಿಮೀರಿದ್ದು, 300 ರೂ. ಕೋಟ್ಟರೆ ನೇರವಾಗಿ ದರ್ಶನಕ್ಕೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ವಿಡಿಯೋ ಒಂದು ವೈರಲ್ ಆಗಿದೆ.‌

ಉತ್ತರ ಕರ್ನಾಟಕದ ಅತ್ಯಂತ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ್ಮನ ಬಳಿ ದರ್ಶನದ ಹೆಸರಿನಲ್ಲಿ ಭಕ್ತರನ್ನು ಲೂಟಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಬರುವ ಸಾರ್ವಜನಿಕ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದರೆ, ಮಧ್ಯವರ್ತಿಗಳಿಗೆ ಹಣ ನೀಡಿದವರಿಗೆ ಮಾತ್ರ ಯಾವುದೇ ಕ್ಯೂ ಇಲ್ಲದೆ ನೇರವಾಗಿ ದೇವಿಯ ದರ್ಶನ ಮಾಡಿಸಲಾಗುತ್ತಿದೆ.

ಸದ್ಯ ದೇವಸ್ಥಾನವು ಸರ್ಕಾರದ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದರೂ ಸಹ ಈ ದಲ್ಲಾಳಿಗಳ ದರ್ಬಾರ್‌ಗೆ ಮಾತ್ರ ಯಾವುದೇ ಕಡಿವಾಣ ಬಿದ್ದಿಲ್ಲ. ದೇವಸ್ಥಾನದ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಈ ಏಜೆಂಟರೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾಗಿದ್ದು, ಹಣ ನೀಡಿದವರನ್ನು ನೇರವಾಗಿ ಗರ್ಭಗುಡಿಯೊಳಗೆ ಬಿಡಲಾಗುತ್ತಿದೆ. 

ಒಬ್ಬ ಭಕ್ತರಿಗೆ ತಲಾ 300 ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿವರೆಗೆ ಹಣ ವಸೂಲಿ ಮಾಡಲಾಗುತ್ತಿದ್ದು, ಸಾರ್ವಜನಿಕರು ತೀವ್ರ ಹೈರಾಣಾಗಿದ್ದಾರೆ.

ಈ ಅಕ್ರಮ ದರ್ಶನದ ದಂಧೆಯಿಂದ ಬೇಸತ್ತಿರುವ ಭಕ್ತರು, ಅಲ್ಲಿನ ದೃಶ್ಯಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಸವದತ್ತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ಜರುಗುತ್ತಿದ್ದು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧ್ಯಕ್ಷರಾದ ಮೊಹಮ್ಮದ್ ರೋಷನ್ ಮತ್ತು ಸ್ಥಳೀಯ ಶಾಸಕರಾದ ವಿಶ್ವಾಸ ವೈದ್ಯ ಅವರು ತಕ್ಷಣವೇ ಈ ಕಡೆ ಗಮನ ಹರಿಸಬೇಕಾಗಿದೆ. 

ಒಂದೆಡೆ ಸರ್ಕಾರವು ಕ್ಷೇತ್ರ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೆ, ಇನ್ನೊಂದೆಡೆ ಸಾಮಾನ್ಯ ಭಕ್ತರಿಗೆ ಮಾತ್ರ ದೇವಿಯ ದರ್ಶನ ಭಾಗ್ಯ ಸಿಗದೆ ಅನ್ಯಾಯವಾಗುತ್ತಿದೆ. 

ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಏಜೆಂಟ್ ಹಾವಳಿಗೆ ಶಾಶ್ವತ ಕಡಿವಾಣ ಹಾಕುತ್ತಾ ಮತ್ತು ಭಕ್ತರಿಗೆ ನ್ಯಾಯ ಒದಗಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button