Belagavi NewsBelgaum NewsKannada NewsKarnataka NewsPolitics

*ನಾನು ಯಾವುದೇ ಖಾತೆ ಕೇಳಿಲ್ಲ: ಕೊಟ್ಟ ಜವಾಬ್ದಾರಿ ನಿಭಾಯಿಸುವೆ ಎಂದ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನಾನು ಪಕ್ಷದ ಹೈಕಮಾಂಡ್ ಅಥವಾ ಮುಖ್ಯಮಂತ್ರಿಗಳ ಬಳಿ ಯಾವುದೇ ನಿರ್ದಿಷ್ಟ ಖಾತೆ ಕೇಳಿರಲಿಲ್ಲ. ಮುಂಚೆ ನನ್ನ ಬಳಿ ಇದ್ದ ಲೋಕೋಪಯೋಗಿ ಇಲಾಖೆಯನ್ನೇ ಅವರೇ ನನಗೆ ವಹಿಸಿಕೊಟ್ಟಿದ್ದಾರೆ,” ಎಂದು ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಗೋಕಾಕ ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು ತಾವಾಗಿಯೇ ಯಾವುದೇ ಇಲಾಖೆಗಾಗಿ ಬೇಡಿಕೆ ಇಟ್ಟಿರಲಿಲ್ಲ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕತ್ವವೇ ಯೋಚಿಸಿ ಈ ಹಿಂದಿನ ಲೋಕೋಪಯೋಗಿ ಖಾತೆಯನ್ನೇ ತಮಗೆ ನೀಡಿದ್ದಾರೆ ಎಂದು ತಿಳಿಸಿದರು.

Home add -Advt

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ರಾಜ್ಯಾದ್ಯಂತ ಹಲವು ಪ್ರಮುಖ ರಸ್ತೆ ಸೇತುವೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಂಪೂರ್ಣ ತೃಪ್ತಿ ನನಗಿದೆ. “ಈಗ ಮತ್ತೊಮ್ಮೆ ಅದೇ ಇಲಾಖೆ ದೊರೆತಿರುವುದು ಸಂತೋಷ ತಂದಿದೆ. ಈ ಹಿಂದೆ ಆರಂಭಿಸಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಇದು ಸಹಕಾರಿಯಾಗಲಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಇಲಾಖೆಯಲ್ಲಿ ಇನ್ನು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಮುಂಬರುವ ದಿನಗಳಲ್ಲಿ ಇಲಾಖೆಯ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸಿ, ರಾಜ್ಯದ ಮೂಲಸೌಕರ್ಯ ವೃದ್ಧಿಗೆ ಇನ್ನಷ್ಟು ಉತ್ತಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸ್ಥಾನ ಹಂಚಿಕೆಯಲ್ಲಿ ಬೆಳಗಾವಿ ಜಿಲ್ಲೆಗೆ ಅನ್ಯಾಯವಾಗಿಲ್ಲ. ಇನ್ನು ಎರಡನೇ ಪಟ್ಟಿ ಬಾಕಿ ಇದ್ದು ಅದರಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವುದು ಖಚಿತ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಅಥವಾ ಹಂಚಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸದ್ಯ ಬಿಡುಗಡೆಯಾಗಿರುವುದು ಮೊದಲ ಪಟ್ಟಿ ಮಾತ್ರ. ಜಿಲ್ಲೆಯ ನಾಯಕರಿಗೆ ಮತ್ತು ಜನರಿಗೆ ಈ ಕುರಿತು ಯಾವುದೇ ಆತಂಕ ಬೇಡ. ಸಚಿವ ಸಂಪುಟದ ಮುಂದಿನ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಗೆ ಖಂಡಿತವಾಗಿಯೂ ಆದ್ಯತೆ ಸಿಗಲಿದೆ. 

ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮುಂಬರುವ ದಿನಗಳಲ್ಲಿ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಸಿಗಲಿದ್ದು, ಹೈಕಮಾಂಡ್ ಎಲ್ಲಾ ಸಮುದಾಯ ಮತ್ತು ಪ್ರದೇಶಗಳನ್ನು ಸಮಾನವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.

ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಲು ಕಾಂಗ್ರೆಸ್ ಪಕ್ಷದ ಆಂತರಿಕ ನಿಯಮವೇ ಪ್ರಮುಖ ಕಾರಣ ಎಂದು ಸಚಿವ ಸತೀಶ್ ಜಾರಕಿಹೊಳಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. “ಪಕ್ಷದಲ್ಲಿ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ಕಟ್ಟುನಿಟ್ಟಿನ ನಿಯಮವಿದೆ. ನಾನು ಈಗಾಗಲೇ ಸಚಿವನಾಗಿರುವುದರಿಂದ ನನಗೆ ಆ ಜವಾಬ್ದಾರಿ ಸಿಗಲಿಲ್ಲ. ಈ ನಿರ್ಧಾರದಿಂದ ತಮಗೇನೂ ಬೇಸರವಾಗಿಲ್ಲ. ಪಕ್ಷದ ನಿಯಮಾವಳಿಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳುವ ಮೂಲಕ ಹೈಕಮಾಂಡ್ ತೀರ್ಮಾನವನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಸಮರ್ಥಿಸಿಕೊಂಡರು.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಮ್ಮ ಹಾಗೂ ಶಾಸಕ ಅಶೋಕ ಪಟ್ಟಣ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವಿಬ್ಬರೂ ಮೊದಲಿನಿಂದಲೂ ಒಟ್ಟಿಗೇ ಇದ್ದೇವೆ. ಜಿಲ್ಲೆಯ ಸಚಿವ ಸ್ಥಾನ ಹಂಚಿಕೆ ಹಾಗೂ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಉಭಯ ನಾಯಕರ ನಡುವೆ ಅಸಮಾಧಾನ ಮೂಡಿದೆ ಎಂಬ ವದಂತಿಗಳಿಗೆ ಸಚಿವರು ತೆರೆ ಎಳೆದ ಅವರು, ನಮ್ಮ ನಡುವೆ ಯಾವುದೇ ರೀತಿಯ ರಾಜಕೀಯ ಮುನಿಸು ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಸಿದ್ದರಾಮಯ್ಯ ಅವರು ನಮ್ಮ ನಾಯಕರು ನಮ್ಮ ಅವರ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

Related Articles

Back to top button