Kannada NewsKarnataka NewsLatest

*ಒಂದೆ ಮಳೆಗೆ ಕೊಚ್ಚಿಹೊದ ನೂತನ ಹೆದ್ದಾರಿ*

ಪ್ರಗತಿವಾಹಿನಿ ಸುದ್ದಿ: ಒಂದೆ ಮಳೆಗೆ ನೂತನವಾಗಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕೊಚ್ಚಿ ಹೋಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.‌

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ತೆಂಕ ಮಿಜಾರಿನಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಮೊದಲ ಮಳೆಗೆ ಕೊಚ್ಚಿ ಹೋಗಿದ್ದರಿಂದ ಮಳೆಗಾಲದ ಆರಂಭದಲ್ಲೇ ಕಳಪೆ ಕಾಮಗಾರಿಯ ಅಸಲಿ ಬಣ್ಣ ಬಯಲಾಗುತ್ತಿದ್ದು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ವೈಜ್ಞಾನಿಕ ಯೋಜನೆ ರೂಪಿಸಿಲ್ಲ. ಹೆಚ್ಚಿನ ಪ್ರಮಾಣದ ನೀರು ಹರಿಯಲು ದೊಡ್ಡ ಮೋರಿ ನಿರ್ಮಿಸುವ ಬದಲಿಗೆ, ಅತ್ಯಂತ ಸಣ್ಣ ಗಾತ್ರದ ಮೋರಿಯನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯ ಮೇಲೆಯೇ ನಿಂತು, ಕೆಳಭಾಗದ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಇದರ ಪರಿಣಾಮವಾಗಿ ರಸ್ತೆಯ ಒಂದು ಭಾಗವೇ ಕುಸಿದು ಬಿದ್ದಿದೆ.

ಪ್ರಸ್ತುತ ತೆಂಕ ಮಿಜಾರು ಪರಿಸರದ ಒಟ್ಟು ಮೂರು ಕಡೆಗಳಲ್ಲಿ ರಸ್ತೆ ಇದೇ ರೀತಿ ಅಪಾಯಕಾರಿಯಾಗಿ ಕುಸಿದಿದೆ. ರಸ್ತೆಯ ಅಡಿಭಾಗದಲ್ಲಿ ಮಣ್ಣು ಇಲ್ಲದಿದ್ದರೂ ಸಹ, ಅದೇ ಮಾರ್ಗದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಪ್ರಾಣದ ಹಂಗು ತೊರೆದು ಸಂಚರಿಸುತ್ತಿವೆ. ನೀರಿನ ಭಾರಿ ರಭಸದ ನಡುವೆಯೇ ವಾಹನ ಸವಾರರು ಜೀವ ಭಯದಲ್ಲೇ ಪ್ರಯಾಣಿಸುತ್ತಿದ್ದು ಯಾವುದೇ ಕ್ಷಣದಲ್ಲಿ ರಸ್ತೆ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.

ಈ ಕಳಪೆ ಮತ್ತು ಬೇಜವಾಬ್ದಾರಿಯುತ ಕೆಲಸದ ವಿರುದ್ಧ ಸಾರ್ವಜನಿಕರು ಹಾಗೂ ವಾಹನ ಸವಾರರು ಕಾಮಗಾರಿ ನಡೆಸಿದ ಡಿಬಿಎಲ್ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ಮಳೆಯನ್ನೇ ತಡೆದುಕೊಳ್ಳದ ಈ ಹೆದ್ದಾರಿ ಮುಂದಿನ ದಿನಗಳಲ್ಲಿ ಇನ್ಯಾವ ಮಟ್ಟದ ಅನಾಹುತಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. 

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಹಾನಿಗೊಳಗಾದ ಭಾಗವನ್ನು ಯುದ್ಧೋಪಾದಿಯಲ್ಲಿ ದುರಸ್ತಿ ಮಾಡಬೇಕು, ಇಲ್ಲದಿದ್ದರೆ ಭಾರಿ ಜೀವಹಾನಿ ಸಂಭವಿಸುವುದು ಖಂಡಿತಾ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಹೆದ್ದಾರಿಯು ಕನಿಷ್ಠ ಒಂದು ವರ್ಷವೂ ತಡೆದುಕೊಳ್ಳದೆ ಮೊದಲ ಮುಂಗಾರು ಮಳೆಗೆ ಧ್ವಂಸಗೊಂಡಿದು ಅಕ್ರೋಶಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button