Karnataka NewsLatestPolitics

*ದೇಶದಲ್ಲಿ ಪೆಟ್ರೋಲ್ ಇಲ್ಲ, ವಿದೇಶದಲ್ಲಿ ಮರ್ಯಾದೆ ಇಲ್ಲ, ರೂಪಾಯಿಗೆ ಬೆಲೆ ಇಲ್ಲ, ಆದರೂ ಬಿಜೆಪಿಗರ ತಿರ್ಪೆ ಶೋಕಿಗೆ ಕಮ್ಮಿ ಇಲ್ಲ: ಶಿವರಾಜ್ ತಂಗಡಗಿ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಪೆಟ್ರೋಲ್‌ ಇಲ್ಲ,‌ ವಿದೇಶದಲ್ಲಿ‌ ಮರ್ಯಾದೆ ಇಲ್ಲ, ರೂಪಾಯಿಗೆ ಬೆಲೆ ಇಲ್ಲ.‌ ಮೀಡಿಯಾದ ಮುಂದೆ ಬರಲು ಧಮ್ಮಿಲ್ಲ. ಆದರೂ ಬಿಜೆಪಿ ನಾಯಕರ ತಿರ್ಪೆ ಶೋಕಿಗೆ ಕಮ್ಮಿ ಇಲ್ಲ…!

ಭಾನುವಾರ ಕಾರಟಗಿ ಪಟ್ಟಣದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗರ ವಿರುದ್ಧ ಈ ಮೇಲಿನಂತೆ ಟೀಕಾ ಪ್ರಹಾರ ನಡೆಸಿದರು.

ದೇಶದಲ್ಲಿ ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇದೆ. ರೈತರ ಪರಿಸ್ಥಿತಿ ಚೆನ್ನಾಗಿಲ್ಲ. ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಈ ಬಗ್ಗೆ ಪ್ರಧಾನಿ‌‌ ನರೇಂದ್ರ ಮೋದಿ ಅವರು ತುಟಿ ಬಿಚ್ಚುತ್ತಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

Home add -Advt

ಬಿಜೆಪಿಗರು ಈ ದೇಶದ ನಾಟಕ ಕಂಪನಿ‌‌ ಇದ್ದಂತೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ತುಸು ಸಿಲಿಂಡರ್ ಬೆಲೆ ಹೆಚ್ಚಾಗಿದ್ದಕ್ಕೆ ಇಡೀ ದೇಶದಲ್ಲಿ ಖಾಲಿ ಸಿಲಿಂಡರ್ ಹೊತ್ತು ಓಡಾಡಿದ ಬಿಜೆಪಿಗರು ಇದೀಗ ಕಾಣುತ್ತಿಲ್ಲ. ಶೋಭಾಕ್ಕ, ಸ್ಮೃತಿ ಇರಾನಿ ಅವರೇ ಎಲ್ಲಿದ್ದೀರಾ? ಎಂದು ಛೇಡಿಸಿದರು.

ದಿನ ಒಂದು ರೊಟ್ಟಿ ತಿನ್ನಿ, ತೈಲ ಉಳಿತಾಯಕ್ಕೆ‌ ಸಾರ್ವಜನಿಕ‌ ವಾಹನ ಬಳಸಿ ಎನ್ನುತ್ತಾ, ಕೆಲವರು ಪ್ರಧಾನಿಯವರನ್ನು ಮೆಚ್ಚಿಸಲು ಸೈಕಲ್ ನಲ್ಲಿ ಓಡಾಡುತ್ತಾ ಇದ್ದಾರೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅದೋಗತಿಗೆ ಹೋಗಿದೆ ಎಂದಾಗ ಬಿಜೆಪಿಯವರು ಜರಿದರು. ಇದೀಗ ಎಲ್ಲಿಗೆ ಬಂದು ನಿಂತಿದ್ದೇವೆ ಎಂದು ಬಿಜೆಪಿಗರು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.

ಪ್ರತಿಭಟನೆ ಮಾಡದಂತೆ ಮನವಿ:
ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಸಚಿವ ಸ್ಥಾನ ನೀಡುವಂತೆ ಯಾರು ಕೂಡ ರಸ್ತೆಗಿಳಿದು ಪ್ರತಿಭಟನೆ ಮಾಡಬಾರದು. ಪಕ್ಷಕ್ಕೆ ಮುಜುಗರ ಉಂಟಾಗುವ ಕೆಲಸ ಮಾಡಬಾರದು ಎಂದು ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಇದೇ ವೇಳೆ ಮನವಿ ಮಾಡಿದರು‌.

ಶಾಸಕರಾದ ಬಸವರಾಜ ರಾಯರೆಡ್ಡಿ ಮತ್ತು ರಾಘವೇಂದ್ರ ಹಿಟ್ನಾಳ್ ಅವರು ಸಚಿವ‌ ಸ್ಥಾನ ನೀಡುವಂತೆ ಪಕ್ಷದ ನಾಯಕರನ್ನು ಕೇಳುವುದು ತಪ್ಪಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು‌.

ಕಾಂಗ್ರೆಸ್ ‌ಪಕ್ಷ‌ ನನಗೆ ಉತ್ತಮ ಅವಕಾಶಗಳನ್ನು ನೀಡಿದೆ. ಎರಡನೇ ಪಟ್ಟಿಯಲ್ಲಿ ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.

Related Articles

Back to top button