ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಆಹ್ವಾನಿಸಿದೆ. ಇಂದು ಮಧ್ಯಾಹ್ನವೇ ಡಿ.ಕೆ.ಶಿವಕುಮಾರ ದೆಹಲಿಗೆ ಹೊರಟಿದ್ದಾರೆ. ಸಿದ್ದರಾಮಯ್ಯ ಸಂಜೆ ತೆರಳಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸಚಿವಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದೆಹಲಿಗೆ ಆಹ್ವಾನಿಸಿದೆ ಎಂದು ಗೊತ್ತಾಗಿದೆ. ಗುರುವಾರ ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ನಾಯಕರೊಂದಿಗೆ ಸಭೆ ನಿಗದಿಯಾಗಿದೆ.
ಡಿ.ಕೆ.ಶಿವಕುಮಾರ ಅವರು ಮಧ್ಯಾಹ್ನ 2.55ರ ವಿಮಾನವನ್ನೇರಲಿದ್ದಾರೆ. ಸಿದ್ದರಾಮಯ್ಯ ಸಂಜೆ 6.30ರ ವಿಮಾನದಲ್ಲಿ ತೆರಳುವರು.
ಕಳೆದ ಶನಿವಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆಗೆ ಕೇವಲ 8 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನೂ ಸುಮಾರು 20 -22 ಜನರು ಸಂಪುಟ ಸೇರುವ ಸಾಧ್ಯತೆ ಇದೆ. ಹಾಗಾಗಿ ಸಚಿವಾಕಾಂಕ್ಷಿಗಳ ಲಾಬಿ ಜೋರಾಗಿ ನಡೆದಿದೆ. ಕೆಲವರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ನಾಳೆ ಸಂಜೆಯ ಹೊತ್ತಿಗೆ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ