Kannada NewsKarnataka NewsLatest

ನಗದು‌ ಹಣ ಸಾಗಾಣಿಕೆ; ಕೀಮ್ ಆ್ಯಪ್ ನಲ್ಲಿ ನಮೂದಿಸುವುದು ಕಡ್ಡಾಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದಿಂದ ಎಲ್ಲೆಡೆ ತಪಾಸಣೆ ಮಾಡಲಾಗುತ್ತಿದೆ. ಆದ್ದರಿಂದ ಅನಗತ್ಯ ಗೊಂದಲವನ್ನು ತಡೆಗಟ್ಟಲು ಬ್ಯಾಂಕುಗಳು ನಗದು ಹಣ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಕೀಮ್ ಆ್ಯಪ್ ನಲ್ಲಿ ಸಂಪೂರ್ಣ ವಿವರವನ್ನು ನಮೂದಿಸಿರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೀಮ್ (KEEM) ಆ್ಯಪ್ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಏ.12) ನಡೆದ ಜಿಲ್ಲೆಯ ಬ್ಯಾಂಕರುಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ವಿಧಾನಸಭೆ ಚುನಾವಣಾ ವೆಚ್ಚ ನಿಗಾ(KEEM-Karnataka Election Expenditure Monitoring) ಆ್ಯಪ್ ಸಿದ್ಧಪಡಿಸಲಾಗಿದೆ‌. ಹಣ ಸಾಗಾಣಿಕೆ ಸಂದರ್ಭದಲ್ಲಿ ಪ್ರತಿಯೊಂದು ಮಾಹಿತಿಯನ್ನು ಕೀಮ್ ಆ್ಯಪ್ ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಸಾಗಾಣಿಕೆ ಮಾಡಲಾಗುತ್ತಿರುವ ಮೊತ್ತ, ಡಿನೊಮಿನೇಷನ್, ಹಣ ಸಾಗಾಣಿಕೆ ವಾಹನ, ಅಧಿಕಾರಿಗಳ ಮಾಹಿತಿ ಸೇರಿದಂತೆ ಪ್ರತಿಯೊಂದು ವಿವರಗಳನ್ನು ಕೀಮ್ ಆ್ಯಪ್ ನಲ್ಲಿ ನಮೂದಿಸಿ ಅದರ ಒಂದು ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡರೆ ಸಾಕು; ಅದೇ ಹಣ ಸಾಗಾಣಿಕೆಗೆ ಪರವಾನಗಿ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಸಾಗಾಣಿಕೆ ವಿವರಗಳನ್ನು ಆ್ಯಪ್ ನಲ್ಲಿ ನಮೂದಿಸದೇ ಇದ್ದರೆ ಇದು ನಿಯಮಾವಳಿಗಳ ಉಲ್ಲಂಘನೆಯಾಗಲಿದೆ. ಆದ್ದರಿಂದ ಎಲ್ಲ ಬ್ಯಾಂಕರುಗಳು ಆ್ಯಪ್ ಡೌನಲೋಡ್ ಮಾಡಿಕೊಂಡು ಅಗತ್ಯ ಕ್ಯೂಆರ್ ಕೋಡ್ ಅನ್ನು ಕೂಡ ಹಣ ಸಾಗಾಣಿಕೆಯ ವಾಹನಗಳಿಗೆ ಅಂಟಿಸಬೇಕು. ಎಸ್.ಎಲ್.ಬಿ.ಸಿ. ಮಾರ್ಗಸೂಚಿಗಳನ್ನು ಪಾಲಿಸುವಂತೆ ಬ್ಯಾಂಕರುಗಳಿಗೆ ತಿಳಿಸಿದರು.

ಎಲ್ಲ ಬ್ಯಾಂಕುಗಳು ಕೀಮ್ ಆ್ಯಪ್ ಡೌನಲೋಡ್ ಮಾಡಿಕೊಂಡು ಹಣ ಸಾಗಾಣಿಕೆ ಮಾಡಬೇಕು. ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಎಲ್ಲೆಡೆ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಅನಗತ್ಯ ಗೊಂದಲವನ್ನು ತಡೆಗಟ್ಟಲು ಎಲ್ಲರೂ ಎಸ್.ಓ.ಪಿ. ಪಾಲಿಸಬೇಕು ಎಂದು ನಿತೇಶ್ ಪಾಟೀಲ ತಿಳಿಸಿದರು.

ನಗದು ಹಣ ಸಾಗಾಣಿಕೆ‌ ಮಾಡುವಾಗಕೀಮ್ ಆ್ಯಪ್ ನಲ್ಲಿ ನಮೂದಿಸಿದ ಮಾಹಿತಿಯ ಮುದ್ರಿತ ಪ್ರತಿ; ನಗದು ವಿವರ
ಅಧಿಕಾರಿಗಳ ಗುರುತಿನ ಚೀಟಿ ಮತ್ತು ವಾಹನದ ದಾಖಲೆ, ಚಾಲಕರ ವಿವರವನ್ನು ಕಡ್ಡಾಯವಾಗಿ ಜತೆಗೆ ತೆಗೆದುಕೊಂಡು ಹೋಗಬೇಕು‌. ಈ ದಾಖಲೆಗಳು ಇಲ್ಲದಿದ್ದರೆ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗೆ ಅವಕಾಶ:

ಬ್ಯಾಂಕ್ ನಗದು ಸಾಗಿಸುವ ವಾಹನಗಳಿಗೆ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಒದಗಿಸಲು ಅನುಕೂಲವಾಗುವಂತೆ ಶಸ್ತ್ರಾಸ್ತ್ರ ಹೊಂದಲು ವಿನಾಯಿತಿ ನೀಡಲಾಗಿರುತ್ತದೆ.
ಇದಕ್ಕಾಗಿ ಇರುವ ಸ್ಕ್ರೀನಿಂಗ್ ಸಮಿತಿಗೆ ಅಗತ್ಯವಾದ ಮಾಹಿತಿಯನ್ನು ಸಲ್ಲಿಸುವ ಮೂಲಕ ವಿನಾಯಿತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಏನಾದರೂ ತಾಂತ್ರಿಕ ತೊಂದರೆಗಳಿದ್ದರೆ ತಕ್ಷಣವೇ ಬಗೆಹರಿಸಿ ಹಣ ಸಾಗಾಣಿಕೆಗೆ ಅವಕಾಶ ಕಲ್ಪಿಸಲಾಗುವುದು. ಆದರೆ ಎಲ್ಲರೂ ಕಡ್ಡಾಯವಾಗಿ ನಿಯಮ‌ ಪಾಲಿಸುವ ಮೂಲಕ ಚುನಾವಣಾ ಅಕ್ರಮ‌ತಡೆಗೆ ಸಹಕರಿಸಬೇಕು ಎಂದು ಜಿಪಂ ಸಿಇಓ ಹಾಗೂ ತ್ರಿಸದಸ್ಯ ಸಮಿತಿ ಮುಖ್ಯಸ್ಥ ಹರ್ಷಲ್ ಭೋಯರ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮಾತನಾಡಿ, ಹಣ ಸಾಗಾಣಿಕೆ ವೇಳೆ ಎಲ್ಲ ಅಗತ್ಯವಾದ ಮಾಹಿತಿ ಮತ್ತು ದಾಖಲೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಬ್ಯಾಂಕ್ ಹೆಸರು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗುವುದನ್ನು ತಡೆಗಟ್ಟುವ ಉದ್ಧೇಶದಿಂದ ಪ್ರತ್ಯೇಕವಾದ ಆ್ಯಪ್ ಸಿದ್ಧಪಡಿಸಲಾಗಿರುತ್ತದೆ. ಆದ್ದರಿಂದ ಯಾವುದೇ ಸಣ್ಣಪುಟ್ಟ ಕಾರಣ ಹೇಳದೇ ನಿಯಮಾವಳಿ ‌ಪಾಲಿಸಬೇಕು ಎಂದು ಸೂಚನೆ ನೀಡಿದರು.

ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಅಮಿತ್ ಶಿಂಧೆ ಮಾತನಾಡಿ, ಕೀಮ್ ಆ್ಯಪ್ ಬಗ್ಗೆ ಏನಾದರೂ ತಾಂತ್ರಿಕ ತೊಂದರೆಗಳಿದ್ದರೆ ಆದಾಯ ತೆರಿಗೆ ಇಲಾಖೆಯ ಸಹಾಯವಾಣಿ ಕೇಂದ್ರಕ್ಕೆ ಕರೆ‌ಮಾಡಿ‌ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಅಗ್ರಣಿ ಬ್ಯಾಂಕ್ ಅಧಿಕಾರಿ ಸಂಜೀವ್ ಹಾಗೂ ಜಿಲ್ಲೆಯ ಎಲ್ಲ ಬ್ಯಾಂಕುಗಳ ಅಧಿಕಾರಿಗಳು, ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

https://pragati.taskdun.com/lakshmana-savadicm-basavaraj-bommaicongress/
https://pragati.taskdun.com/cm-basavraj-bommaireactionlakshman-savadi/
https://pragati.taskdun.com/d-k-shivakumarr-ashokreactionvidhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button